Showing posts with label ನೆತ್ತಿ ಹತ್ತುವುದು. Show all posts
Showing posts with label ನೆತ್ತಿ ಹತ್ತುವುದು. Show all posts

Friday, December 26, 2008

ಗಬಗಬ ತಿನ್ನುವುದು, ನೆತ್ತಿ ಹತ್ತುವುದು

ನನಗೆ ಅಂದಿನ ದಿನಗಳು ನೆನಪಿಗೆ ಬರುತ್ತವೆ. ನಾನು ಪ್ರೌಡಶಾಲೆಗೆ ಹೋಗುತ್ತಿದ್ದಾಗ ನಮ್ಮ ಶಾಲೆ ಪ್ರಾರಂಭವಾಗುತ್ತಿದ್ದ ಸಮಯ ಹನ್ನೊಂದು ಗಂಟೆ. ನಮ್ಮ ತಂದೆಯ ತಾಲ್ಲೂಕು ಕಛೇರಿ ಪ್ರಾರಂಭವಾಗುತ್ತಿದ್ದ ಸಮಯವೂ ಹನ್ನೊಂದು ಗಂಟೆ. ಆ ಸಮಯ ಸಾಧಿಸಲು ಮನೆಯಿಂದ ಹದಿನೈದು ನಿಮಿಷಗಳ ಮೊದಲಾದರೂ ಹೊರಡಬೇಕಾಗಿತ್ತು. ಆ ಹೊತ್ತನ್ನು ಸರಿತೂಗಿಸಿ ಅಡಿಗೆ ಸಿದ್ಧಪಡಿಸುವುದು ನಮ್ಮ ಅಮ್ಮನಿಗೆ ಕಷ್ಟವಾಗುತ್ತಿತ್ತು. ಆಗ ಗ್ಯಾಸ್ ಆಗಲೀ ಸೀಮೆ‍ಎಣ್ಣೆಯ ಸ್ಟೊವ್‍ಆಗಲೀ ಇರಲಿಲ್ಲ. ಇದ್ದಿಲು ಒಲೆಯಲ್ಲಿ ಅಡಿಗೆ ಆಗಬೇಕು. ಒಲೆ ಹಚ್ಚುತ್ತಿದ್ದುದು ಹೇಗೆ ಗೊತ್ತೆ? ನೀರಿನ ಮನೆಯ ಒಲೆಯಿಂದ ಕೆಂಡ ತಂದು ಅದನ್ನು ಕಬ್ಬಿಣದ ಇದ್ದಲು ಒಲೆಗೆ ಹಾಕಿ ಅದರಮೇಲೆ ಇದ್ದಲು ಹರಡಿ ಗಾಳಿ ಬೀಸಿ ಉರಿಬರಸಬೇಕಾಗಿತ್ತು. ಇಷ್ಟೂ ಅಲ್ಲದೆ `ಪ್ರೆಷರ್ ಕುಕ್ಕರ್'ಗಿಂತ ಹಿಂದಿನ ಕಾಲ. ಕೊಳತಪ್ಪಲೆಯಲ್ಲಿ ಬೇಳೆ ಬೆಯ್ಯಲು ಇಡಬೇಕು. ಅನ್ನಕ್ಕೆ ತಪ್ಪಲೆಯಲ್ಲಿ ನೀರು ಕುದಿಸ ಬೇಕು. ಅಕ್ಕಿ ತೊಳೆದು ಕುದ್ದ ನೀರಿಗೆ ಹಾಕಿ ಅನ್ನ ಬೇಯಿಸಬೇಕು. ಕೆಲವೊಮ್ಮೆ ಗಂಜಿಯನ್ನು ಬಸಿಯಬೇಕು. ಹುಳಿ ಅಥವಾ ಸಾರು ಮಾಡಬೇಕಾದರೆ ಬೇಳೆ ಬೆಂದಮೇಲೆ ತರಕಾರಿ ಹಾಕಿ ಅದು ಬೆಂದಮೇಲೆ ಖಾರ, ಹುಳಿ ಮತ್ತು ಉಪ್ಪು ಸಕಾಲದಲ್ಲಿ ಒಂದಾದಮೇಲೆ ಒಂದು ಬೆರೆಸಿ, ಅವುಗಳು ಊರಬೇಕಾದಷ್ಟು ಕಾಲಕ್ಕೆ ಕಾದು ಕುದಿಸಿ ಒಗ್ಗರಣೆ ಹಾಕಬೇಕು. ಇರಲಿ ಇದು ಅಮ್ಮನ ಪಾಲಿನ ಕೆಲಸ. ನಾವು ತಟ್ಟೆಹಾಕಿಕೊಂಡು ಊಟಕ್ಕೆ ಕುಳಿತರೆ, ತಟ್ಟೆಗೆ ಬೀಳುತ್ತಿದ್ದುದು ಬಿಸಿ ಬಿಸಿ ಆವಿಯಾಡುವ ಅನ್ನ, ಕುದಿಯುತ್ತಿರುವ ಸಾರು ಇಲ್ಲವೆ ಹುಳಿ. ಮುಟ್ಟಿದರೆ ಕೈಸುಡುತ್ತಿತ್ತು. `ಒಂದು ಚೂರು ಅನ್ನ ಸ್ವಲ್ಪ ಸಾರು ತಟ್ಟೆಯ ಅಂಚಿಗೆ ಎಳೆದು ಕಲಿಸಿಕೋ ಒಂದು ಕ್ಷಣ ತಡಿ ಆರುತ್ತದೆ, ಅದು ತಿನ್ನು ಆಮೇಲೆ ಅದೇ ತರಹ ಇನ್ನೊಂದು ತುತ್ತು ಮಾಡಿಕೋ' ಇದು ಪ್ರತಿನಿತ್ಯ ಅಮ್ಮ ಕೊಡುತ್ತಿದ್ದ ಆದೇಶ. ಹೊತ್ತು ಸರಿತೂಗಿಸಲು ನಾವು ಗಬಗಬ ತಿನ್ನುತ್ತಿದ್ದೆವು.
ಗಬಗಬ ತಿನ್ನುವುದು ಶಾಲೆಯದಿನಗಳಿಗಷ್ಟೆ ಸೀಮಿತವಾಗಿರಲಿಲ್ಲ. ಇಂದಿನವರೆಗೂ ನಡೆದು ಬಂದಿದೆ. ನನಗೆ ಯಾವ ಓಟದ ಸ್ಪರ್ಧೆಯಲ್ಲೂ `ಕಪ್' ಬಂದಿಲ್ಲ. ಆದರೆ ಊಟಮಾಡುವ ವೇಗದದಲ್ಲೆ ಏನಾದರು ಸ್ಪರ್ಧೆಯಿಟ್ಟರೆ `ಕಪ್' ಖಂಡಿತ ಸಿಕ್ಕೇ ಸಿಗುತ್ತದೆ.
ಮೊನ್ನೆ ಮೊನ್ನೆ ದವಡೆ ಹಲ್ಲು ನೋವು ಕಾಣಿಸಿಕೊಂಡಿತು. ಅದು ಎಷ್ಟು ಸಹಿಸಲಸಾಧ್ಯವಾಗಿತ್ತೆಂದರೆ, ನನ್ನ ಎಲ್ಲ ಮನಸ್ಸೂ ಸೇರಿ ಎಲ್ಲ ಕರಣಗಳು ಹಲ್ಲಿನ ಮೇಲೇ ಕೇಂದ್ರೀಕೃತವಾಗಿ, ಮತ್ತಾವುದರ ಕಡೆಗೂ ಹರಿಯಲು ಅಸಾಧ್ಯವಾಗಿತ್ತು. ಆಗ ನಾನು ರಾಮಕೃಷ್ಣ ಆಶ್ರಮದ ಪ್ರವಚನಗಳಲ್ಲಿ ಕೇಳಿದ್ದದ್ದು ನೆನೆಪಿಗೆ ಬಂತು - ಭಕ್ತಿ ಎಂದರೆ ಹಲ್ಲು ನೋವಿದ್ದಾಗ ನಿಮ್ಮ ಗಮನವೆಲ್ಲವು ನೋವಿನ ಮೇಲೆ ಕೇಂದ್ರೀಕೃತವಾಗುವಂತೆ, ನಿಮ್ಮ ಗಮನ ದೇವರ ಮೇಲೆ ಆದರೆ ಅದೇ ಭಕ್ತಿ.(ಭಕ್ತಿಯ ಡೆಫೆನಿಷನ್ನನ್ನು ಅರ್ಥಮಾಡಿಕೊಂಡೆ; ಆದರೆ ಅದನ್ನು ನಾನು ಅಳವಡಿಸಿಕೊಳ್ಳಲು ಸಮರ್ಥನಾಗಲಿಲ್ಲ.)
ಭಕ್ತಿಗೂ ಹಲ್ಲು ನೋವಿಗೂ ಸಂಬಂಧ ಗೊತ್ತಾಯಿತು, ಊಟಮಾಡುವುದಕ್ಕೂ ಹಲ್ಲು ನೋವಿಗೂ ಸಂಬಂಧ ಇದ್ದೇ ಇತ್ತು. ಊಟ ಮಾಡುವ ವೇಗ ಕಡಿಮೆಯಾಯಿತು. ಗಬಗಬ ತಿನ್ನಲು ಆಗುತ್ತಿಲ್ಲ. ನಿಧಾನವಾಗಿ ತುತ್ತನ್ನು ಬಾಯಿಯಲ್ಲಿ ಯಾವ ಬಾಗಕ್ಕೆ ತಳ್ಳಿಕೊಂಡು ಅಗಿದರೆ ನೋವು ಸಹಿಸಲು ಆಗುವುದೋ ಹಾಗೆ ಅಗಿದು ಊಟಮಾಡುವುದೆಂದರೆ `ಸ್ಪೀಡ್' ಕಡಿಮೆ ಆಗಲೇ ಬೇಕು. ದಂತ ವೈದ್ಯರ ಬಳಿ ಹೋಗಿ ಹಲ್ಲು ಕೀಳಿಸಿಕೊಂಡೆ. ನೋವು ಹೋಯಿತು. ಆದರೆ ದವಡೆ ಹಲ್ಲು ಮಾಯವಾಗಿದ್ದರಿಂದ ಅಗಿಯಲು ತೊಂದರೆ ಉಳಿದುಕೊಂಡಿತು. ಅಂದರೆ ಗಬಗಬ ತಿನ್ನಲು ಆಗದು. ಆದ್ದರಿಂದ ಹಳೆಯ ನೆನಪುಗಳು ಬಂದವು. ಅಡಿಗೆ ಮಾಡಲು ಅಮ್ಮನ ಕಷ್ಟಗಳು ಕಣ್ಣು ಮುಂದೆ ಬಂತು. ಆಗ ಅಡಿಗೆಗೆ ಮೂರು ಗಂಟೆ ಈಗ ಮುಕ್ಕಾಲು ಗಂಟೆ, ಹೆಂಡತಿ ತೌರುಮನೆಗೆ ಹೋದರೂ ಗಂಡಸೇ ಪಾಕ ಪ್ರವೀಣನಾಗಬಹುದು. ಇನ್ನೊಂದು ವಿಷಯ ಗಬಗಬ ತಿನ್ನುವಾಗ ನೆತ್ತಿಹತ್ತಿ ಕಷ್ಟಪಡುವುದು ಆಗಾಗ್ಗೆ ಆಗುತ್ತಲೇ ಇತ್ತು. ಅದು ಈಗ ವಿರಳವಾಗಿದೆ. ನಿಧಾನವಾಗಿ ಊಟಮಾಡಲೂ ಸಮಯವಿದೆ, ಏಕೆಂದರೆ ಈಗ ನಾನು `ರಿಟೈರ್ಡ್'.