ಬೇಬಿ ಸಿಟ್ಟಿಂಗಿಗೆ ಅಮೇರಿಕಾ ಭೇಟಿ
May 19, 2007 - 12:19pm — mnsrao
ನಾವಿಬ್ಬರೇ ಬೆಂಗಳೂರಿನಲ್ಲಿ ಇದ್ದೇವೆ. ಮಕ್ಕಳು ಅವರ ಗಂಡಂದಿರ ಮತ್ತು ಮಕ್ಕಳ ಜೊತೆ ಸಂಸಾರ ಮಾಡಿಕೊಂಡು ಅಮೇರಿಕದಲ್ಲಿ ನೆಲೆಸಿದ್ದಾರೆ. ನೀವಿಬ್ಬರೇ ಇದ್ದೀರಿ ಬೇಜಾರಗಲ್ವೆ ಅಂತ ಮಕ್ಕಳು ಕೇಳೋದ್ರಲ್ಲಿ ಆಶ್ಚರ್ಯ ಇಲ್ಲ; ಆದರೆ ನಮ್ಮ ಸುತ್ತುಮುತ್ತಿನವರೂ ಅದೇ ರೀತಿ ಕೇಳ್ತಾರೆ. ನಿಮಗೆ ವಯಸ್ಸಾದ ಕಾಲಕ್ಕೆ ನೋಡಿಕೊಳ್ಳಲು ಹತ್ತಿರದಲ್ಲಿ ಯಾರು ಇಲ್ಲವಲ್ಲ ಎಂದು ನಮಗಿಂತ ಅವರೇ ಪೇಚಾಡಿಕೊಳ್ಳುವವರು 'ಅಯ್ಯೋ ಪಾಪ’ ಅನ್ನೋ ಇನ್ನೊಂದು ಥರಹ ಜನ ಇದ್ದಾರೆ. ಈಗೇನೋ ಅಂತೂ ಇಂತೂ ಗಟ್ಟಿ ಮುಟ್ಟಾಗಿಯೇ ಇದ್ದೀವಿ. ನಾವಿಬ್ಬರೇ ’ಒಂಟಿಯಾಗಿ’ ಇದ್ದೇವೆ. ರ್ಧೈರ್ಯ ಇದೆ; ಅಮೇಲೇನಾಗತ್ತೋ ಅಮೇಲೆ ನೊಡ್ಕೊಳ್ಳೋಣ.
ನಾವು ಮೊದಲಸಾರಿ ಅಮೇರಿಕಾಗೆ ಹೋಗಿದ್ದು ಮೊದಲ ಮಗಳ ಮೊದಲ ಮಗು ಹುಟ್ಟಿದಾಗ. ಸಹಜವಾಗಿ ತಾಯಿಯ ಸನಿಹ ಮಗಳಿಗೆ ಬೇಕೇ ಆಗಿತ್ತು. ಅದೆಲ್ಲ ಸರಿ ನಮ್ಮನ್ನು ಭೇಟಿ ಆದ ಇಂಡಿಯನ್-ಅಮೇರಿಕನ್ನರು ’ಓ ಬೇಬಿ ಸಿಟ್ಟಿಂಗ್‍ಗೆ ಬಂದಿದ್ದೀರಾ’ ಅಂತಾನೇ ಕೇಳೋರು. ಅದು ಆಗಿ ಆಗಲೇ ೯ ವರ್ಷಗಳಾಯಿತು. ಇದಾದ ಮೇಲೆ ಅಗ್ಗಾಗ್ಗೆ ಹೊಗಿಬರುತ್ತಿದ್ದೇವೆ. ಇನ್ನೊಂದಿಬ್ಬರು ಮೊಮ್ಮಕ್ಕಳ ’ಬೇಬಿ ಸಿಟ್ಟಿಂ’ಗಿಗೆ. ಒಂದೆರಡು ಬಾರಿ ಕೆಲವು ಜುಜುಬಿ ಕಾರಣಗಳಿಗೆ ಅಂಥ ಇಟ್ಟುಕೊಳ್ಳಿ.
ಅಲ್ಲಿ ಮಜವಾಗಿರತ್ತೆ ಅಂತ ತಿಳ್ಕೋಬೇಡಿ. ನಮ್ಮ ಕಷ್ಟ ನಮಗೆ; ನಿಮಗೇನ್ ಗೊತ್ತು. ಮೊದಲು ಊರಲ್ಲಿ ನಾವಿಲ್ಲದೇ ಇದ್ದಾಗ ಮನೆ ನೋಡಿಕೊಳ್ಳೋದಕ್ಕೆ ಕಾವಲುಗಾರರು ಬೇಕು. lock on the door is an indication to the gentleman that the resident is out; it is also an invitation to thief to burgle. ಜನ ಹೊಂದಿಸಬೇಕು; ದರ ಕುದುರಿಸಬೇಕು.
ಈ ಕಂತಿನಲ್ಲಿ ’ಬೇಬಿ ಸಿಟ್ಟಿಂಗ್’ ವಿಷಯ ತೊಗೊಳ್ತೀನಿ. ಮೊದಲನೇ ಸಲ ಗರ್ಭಿಣಿಯಾದ ಹೆಣ್ಣಿಗೆ ’ಸೀಮಂತ’ ಅಂತ ಒಂದು ಸಮಾರಂಭ ಸಾಮಾನ್ಯವಾಗಿ ನಡೆದೇ ನಡೆಯುತ್ತೆ. ಇದಕ್ಕೆ ’ಬಳೆ ತೊಡಿಸುವುದು’ ಅಂತಾನೂ ಕರೀತಾರೆ. ಹೆಣ್ಣು ತಾಯಿಯಾದಾಗ ಅವಳ ಜೀವನ ತುಂಬಿದಂತೆ ಅಲ್ಲವೇ; ಅದಕ್ಕೆ ಮೊದಲ ಸಲ ಗರ್ಭಿಣಿಯಾಗುವುದು ಸಂಭ್ರಮ. ತೌರುಮನೆಯಲ್ಲಿ ಇದು ನಡೆಯುವುದು ಹೆಚ್ಚು, ಏಕೆಂದರೆ ಹೆರಿಗೆಗೆ ತೌರುಮನೇಗೆ ಹೋಗುವುವ ಪರಿಪಾಟ ಈಗಲೂ ಇದೆ ಅನ್ನಿ. ಅಮೇರಿಕಾದಲ್ಲಿ "ಅದಕ್ಕೆ ಬೇಬಿ ಷವರ್" ಅಂತ ಕರೀತಾರೆ. ಆದರೆ ಅಮೇರಿಕಾದಲ್ಲಿರುವ ದಂಪತಿಗಳು ಅಲ್ಲೇ ಮಗು ಹುಟ್ಟಿದರೆ ಮಗೂಗೆ ಜನ್ಮದಿಂದ citizenship ಸಿಗುತ್ತಲ್ಲಾ ಅಂತ ಅಮ್ಮ(ನ ಮನೆಯ)ನ್ನೇ ಅಲ್ಲಿಗೆ ಕರೆಸಿಕೊಳ್ಳುತ್ತಾರೆ. ಆದ್ದರಿಂದ ಸೀಮಂತಕ್ಕೆ ಹೊಸ ತಿರುವು ಬಂದಿದೆ. ಬೇಬಿ ಷವರ್ ಇಲ್ಲಿ ಸ್ನೇಹಿತರು ಮಾಡುತ್ತಾರೆ. ಅದರದೇ ಒಂದು ಶೈಲಿ. ಆಕರ್ಷಣೆಯ ಕೇಂದ್ರವಾದ ಹೆಣ್ಣು ನಮ್ಮಲ್ಲಿರುವಂತೆ ನಾಚಿ ಮುದುಡಿ ಇರುವುದಿಲ್ಲ. ಅವಳೂ ಮೋಜಿನಲ್ಲಿ ಸೇರಿಕೊಳ್ಳುತ್ತಾಳೆ. ಆದರೆ ಆ ಸಮಾರಂಭದ ತಯಾರಿ ಬಹಳಸಾರಿ ಗುಟ್ಟಾಗಿ ನಡೆಯುತ್ತದೆ; ಅವಳಿಗೆ ಅದು ಸೋಜಿಗವಾಗುವ ರೀತಿಯಲ್ಲಿ. ದಂಪತಿಗಳ ಸ್ನೇಹಿತ ದಂಪತಿಗಳಿಗೆ ಅದೊಂದು ಸಂಭ್ರಮ. ತಮ್ಮ ಅನುಭವಗಳನ್ನು ಸಲೀಸಾಗಿ ಹಂಚಿಕೊಳ್ಳುತ್ತಾರೆ. ಹುಟ್ಟುವ ಮಗುವಿಗೆ ಬೇಕಾಗುವಂಥ ಉಡುಗೆರೆ ತರುತ್ತಾರೆ. ಈಗಾಗಲೇ ಹುಟ್ಟುವ ಮಗು ಗಂಡೋ, ಹೆಣ್ಣೋ ಎಂದು ಗೊತ್ತಾಗಿಬಿಟ್ಟಿರುತ್ತದೆ - scanning ಉಪಯೋಗಿಸಿ ಕಂಡುಕೊಂಡಿರುತ್ತಾರೆ.
ಇನ್ನೊಂದು ವಿಶೇಷವೆಂದರೆ ಗಂಡಂದರಿಗೆ ಅಮೇರಿಕಾದಲ್ಲಿ ಹೆರಿಗೆಯ ಸಮಯದಲ್ಲಿ ಹೆಂಡತಿಯಜೊತೆ ಇರಲು ಆಸ್ಪತ್ರೆಗಳಲ್ಲಿ ಅವಕಾಶವಿದೆ. ಇದು ಭಾರತದವರಿಗೆ ಕಸಿವಿಸಿಯಾಗಬಹುದು. ಆ ಸಮಯದಲ್ಲಿ ಗಂಡನ ನೈತಿಕ ಬೆಂಬಲ ಇದ್ದರೆ ನೋವಿನ ತೀವ್ರತೆ ಕಡಿಮೆಯಾಗುತ್ತದೋ ಏನೋ. ಗರ್ಭದಿಂದ ಹೆರಿಗೆವರಿಗೆ ಸಮಾಲೋಚನೆಯ ಸಮಯದಲ್ಲಿ ಡಾಕ್ಟರ್‍ಗಳು ಗಂಡನನ್ನೂ ಸೇರಿಸಿಕೊಳ್ಳುತ್ತಾರೆ.
ಮಗು ಹುಟ್ಟಿತು ಅನ್ನಿ. ಆ ಸುದ್ದಿಯ ಪ್ರಸರಣ ಪತ್ರಿಕೆ ಆ ಮಗುವಿನ ಹೆಸರು, ತೂಕ, ಉದ್ದ (ಕೆಲವೊಮ್ಮೆ ಕಾಲಿನ ಅಚ್ಚು) ಒಳಗೊಂಡಿರುತ್ತವೆ. ಇದೇನಿದು ಮಗುವಿನ ಹೆಸರು ನಾಮಕರಣವಾಗಬೇದವೇ ಅನ್ನಬೇಡಿ. ಅಮೇರಿಕದಲ್ಲಿ ಆಸುಪತ್ರೆಗೆ ಮಗು ಹುಟ್ಟಿದಾಗಲೇ ಹೆಸರು ತಿಳಿಸಬೇಕು - ಜನ್ಮ ದಾಖಲು ಪತ್ರ ಪಡೆಯಲು.
ಅಮೇರಿಕಾದವರು ಇಂಗ್ಲೇಂಡ್‍ನಿಂದ ಬೇರೆಯಾದ ನಡುವಳಿಕೆಯನ್ನು ಮೊದಲಿನಿಂದಲೇ ಹುಟ್ಟುಹಾಕಿಕೊಂಡಿದ್ದಾರೆ. ಈ ಕಾರಣದಿಂದ ಕೆಲವು ರೀತಿ ನಮಗೂ ತಿರುಗುಮುರುಗಾಗಿ ಕಾಣಿಸುತ್ತದೆ.
ಅನುಭವ ಕಥನ
ಪ್ರತಿಕ್ರಿಯೆ
--------
May 22, 2007 - 11:44pm — muralihr
ಉ: ಬೇಬಿ ಸಿಟ್ಟಿಂಗಿಗೆ ಅಮೇರಿಕಾ ಭೇಟಿ
ಮನುಷ್ಯ ಸರಳವಾಗಿ ಹುಟ್ಟುವ ಕ್ರಿಯೆಯನ್ನು .. ಬುದ್ಧಿಯನ್ನು ಉಪಯೋಗಿಸಿ ತೀರ Complex ಮಾಡಿದ್ದಾನೆ.
ಮಗುವೊ೦ದು ಸೃಷ್ಟಿಯ ವರ , ಆದರೆ ನಾವು ಅದಕ್ಕೆ ಹುಟ್ಟಿನಿ೦ದ ಪಟ್ಟಿಯನ್ನು ಕಟ್ಟಲು ಪ್ರಾರ೦ಭ ಮಾಡುತ್ತೇವೆ.
ನೀನು "ಬ್ರಾಹ್ಮಣ", "ಭಾರತೀಯ " etc.. ಈಗ ಈ ಪಟ್ಟಿಯಿ೦ದ ಅಷ್ಟು ಪ್ರಯೋಜನವೆಲ್ಲಾ.. ಅಮೇರಿಕನ್ ಎ೦ಬ ಪಟ್ಟಿಯನ್ನು
ಪಡೆದರೆ ಸು:ಖಿಯಾಗಿರಬಹುದು ... ಇತ್ಯಾದಿ ಕಲ್ಪನೆ.
ನಿನ್ನೆ ನಾನು ಬಿಳಿಗಿರಿ ರ೦ಗನ ಬೆಟ್ಟದ ಸೋಲಿಗರ ಜೀವನ ಕ್ರಮವನ್ನು ತಿಳಿದುಕೊಳ್ಳಲು ಹೋಗಿದ್ದೆ.
ಅಲ್ಲಿ ಪ್ರಸೂತಿ ನಡೆಯುವ ಸಮಯದಲ್ಲಿ ಮನೆಯವರು ಒ೦ದು ಬ೦ದೂಕು ತರುತ್ತಾರೆ.
ಇನ್ನೇನು ನೋವು ಹೆಚ್ಚಾಗಿರಬೇಕಾದರೆ. ಬ೦ದೂಕಿನಿ೦ದ ಗು೦ಡನ್ನು ಗಗನಕ್ಕೆ ಹಾರಿಸುತ್ತಾನೆ.
ಆ ಶಬ್ದದದ ಉತ್ಪತ್ತಿಯಿ೦ದ ಗಾಬರಿಗೊ೦ಡು ಮಗುವನ್ನು ತಾಯಿ ಗರ್ಭದಿ೦ದ ತಳ್ಳುತ್ತಾಳೆ.
ಅಲ್ಲಿ ಅವಳಿಗೆ ಸಹಾಯಕ್ಕೆ ಯಾವುದೇ Institution (ಸರ್ಕಾರ, ಆಸ್ಪತ್ರೆ, ) ಇತ್ಯಾದಿ ಇರುವುದಿಲ್ಲಾ.
ಅವರದೇ ಆದ ಕ್ರಮವನ್ನು ಕ೦ಡುಕೊ೦ಡಿದ್ದಾರೆ. ಆ ಮಗುವಿನ ಜನ್ಮದಲ್ಲಿ ಯಾವುದೇ ಪೂರ್ವ ದಲ್ಲಿ ಕೈಗೊ೦ಡ ಹೊ೦ಚು ಇರುವುದಿಲ್ಲಾ.
ಆದರೆ ನಮ್ಮ ಆಧುನಿಕ ಸಮಾಜದಲ್ಲಿ ಮದುವೆ ಯಿ೦ದ ಹಿಡಿದು, ಮಗುವು ಹುಟ್ಟುವ ವರೆಗೂ, ಕೊನೆಗೆ ಶಿಕ್ಷಣ ವನ್ನು
ಪಡೆಯುವ ವರೆಗೂ ತ೦ದೆ ತಾಯಿಯ ಮೋಹದ ಚಾತರ್ಯದ ಹೊ೦ಚಿಗೆ ಬಲಿಯಾಗುತ್ತದೆ ಕೂಸು.
೧೫-೮-೫೦
9 years ago
No comments:
Post a Comment