Sunday, June 27, 2010

ಸಮವಸ್ತ್ರ

ಸಮವಸ್ತ್ರಧರಿಸಿದ ಒಂದು ಸಮೂಹವನ್ನು ನೋಡುವುದೇ ಆನಂದ. ಉದಾಹರಣೆಗೆ ಶಾಲಾ ಮಕ್ಕಳ, ಯೋಧರ ಪೆರೇಡ್.

ಇವರುಗಳು ಸಮವಸ್ತ್ರ ಧರಿಸಲು ಇಷ್ಟಪಡುತ್ತಾರೋ ಇಲ್ಲವೋ ಅದು ನಿಯಮವಾದ್ದರಿಂದ ನಡೆದುಕೊಂಡು ಬಂದಿದೆ. ನನ್ನ ಅನುಭವ ಬೇರೆ. ಸರ್ವೇ ಸಾಮಾನ್ಯವಾಗಿ ಸಮವಸ್ತ್ರ ಕೇವಲ ಕೆಳದರ್ಜೆ ಕೆಲಸದವರಿಗೆ ನಿಯತವಾಗಿರುವುದರಿಂದ (ಪೋಲಿಸ್, ಸೈನ್ಯ ವಿನಃ) ಅದನ್ನು ಧರಿಸಲು ಏಕೋ ಹಿಂಜರಿಕೆ. ಹಿಂದೆ ಅಂಚೆ ಮತ್ತು ತಂತಿ ಇಲಾಖೆಯ ನವುಕರರಿಗೆ ಕಾಖಿ ಬಣ್ಣದ ಉಡುಪು ಸಮವಸ್ತ್ರವಾಗಿರುತ್ತಿತ್ತು. ತಂತಿ ಇಲಾಖೆಯು ರೈಲ್ ಇಲಾಖೆಯ ದೂರಸಂಪರ್ಕವನ್ನೂ ನೋಡಿಕೊಳ್ಳುತ್ತಿದ್ದ ಕಾಲದಲ್ಲಿ ತಂತಿ ಇಲಾಖೆಯ ಲೈನ್‍ಮನ್ ಪ್ರತಿ ಮೈಲ್ ಅಥವಾ ಎಕ್ಸ್‍ಪ್ರೆಸ್ ಬಂಡಿ ಬರುವಾಗ ಸಮವಸ್ತ್ರ ಧರಿಸಿ ಪ್ಲಾಟ್ ಫಾರಂ ನಲ್ಲಿ ಪ್ರಮುಖವಾದ ಜಾಗದಲ್ಲಿ ನಿಂತಿರಬೇಕೆಂಬ ನಿಯಮವಿತ್ತು. ಇದಕ್ಕೆ ಕಾರಣ ಆ ರೈಲ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಯಾರಾದರೂ ಅಧಿಕಾರಿ ತಂತಿ ದೂರಸಂಪರ್ಕದ ಲೈನಿನಲ್ಲಿ ಯಾವುದಾದರೂ ದೋಷ ನೋಡಿದ್ದಲ್ಲಿ ಲೈನ್‍ಮನ್ ಗೆ ಆದೇಶ ಕೊಡಲು ಸಾಧ್ಯವಾಗಲಿ ಎಂದು. ನಾನು ೫೦-೬೦ರ ದಶಕದಲ್ಲಿ ಕೇಳಿದ ಕೊರತೆ ಎಂದರೆ ರೈಲ್ ನಿಲ್ದಾಣದ ಕೇಟರಿಂಗ್ ವಿಭಾಗದ ನವುಕರರ ಉಡುಪೂ ಕಾಖಿ ಬಣ್ಣವಾಗಿದ್ದರಿಂದ ನಮ್ಮ ಲೈನ್‍ಮನ್ ಅನ್ನು ಕೇಟರಿಂಗ್ ವಿಭಾಗದ ನೌಕರರೆಂದು ತಪ್ಪು ಗ್ರಹಿಸಿ ’ಚಹಾ ತಾ’ ಅಂತ ಕರೆದಿದ್ದುಂಟಂತೆ.

ಇನ್ನೊಂದು ಪ್ರಸಂಗ: ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹಿಂಜರಿಯುತ್ತಿದ್ದ ಒಬ್ಬ ವ್ಯಕ್ತಿ ನಿವೃತ್ತಿಯಾದಮೇಲೆ ಒಂದು ಸೆಕ್ಯುರಿಟಿ ಕಂಪನಿಗೆ ಸೇರಿದ. ಆತನನ್ನು ನಾನು ಸಮವಸ್ತ್ರದಲ್ಲಿದ್ದುದನ್ನು ನೋಡಿ ಇಲಾಖೆಯಲ್ಲಿ ಇದ್ದಾಗ ಸಮವಸ್ತ್ರದಲ್ಲಿ ನಿಮ್ಮನ್ನು ನೋಡಿದ್ದೇ ಇಲ್ಲ ಎಂದು ಕೇಳಿದಾಗ ಆತ ಹೀಳಿದ್ದು ಇಲ್ಲಿ ಹಾಗೆ ನಡೆಯೊಲ್ಲ. ನಿಯಮ ಮುರಿದರೆ ಕೆಲಸ ಹೋಗುತ್ತೆ ಅಂದರು. ಹೇಗಿದೆ ತಮಾಷೆ!

ಈಗೀಗ ಕೆಲವು ಕಡೆ ಮೇಲ್ದರ್ಜೆ ಅಧಿಕಾರಿಗಳಿಗೂ ಸಮವಸ್ತ್ರವನ್ನು ನಿಯಮಿಸಿದ್ದಾರೆ. ಆ ತರಹ ಯೋಚನೆ ನಮ್ಮದೂರಸಂಪರ್ಕ ಇಲಾಖೆಯಲ್ಲಿ ಒಂದು ಸಣ್ಣ ವಿಭಾಗದಲ್ಲಿ ಒಬ್ಬರಿಗೆ ಬಂತು. ಆದರೆ ಅದನ್ನು ಸರಬರಾಜು ಮಾಡಲು ಅಥವಾ ಅದರ ಖರ್ಚು ಭರಿಸಲು ರೂಲ್ಸ್ ನಲ್ಲಿ ಅವಕಾಶವಿರಲಿಲ್ಲ. ಬಿಳಿ ಪ್ಯಾಂಟ್, ಬಿಳಿ ಬುಷ್ ಶರ್ಟ್ ಉಪಯೋಗಿಸಲು ಎಲ್ಲ ಅಧಿಕಾರಿಗಳನ್ನೂ ವಿನಂತಿಸಗೊಳ್ಳಲಾಯಿತು. ಅಧಿಕಾರಿಗಳಿಗೂ ಆಗಿನ ಕಾಲದಲ್ಲಿ ಸಂಬಳ ಸಾಲುತ್ತಿರಲಿಲ್ಲ, ಯಾರೂ ಸಹಕರಿಸಲಿಲ್ಲ. ಮುಖ್ಯ ಅಧಿಕಾರಿಯು ಕೆಲ ದಿವಸ ಹಾಗೆ ಮಾಡಿ ಆಮೇಲೆ ಅವರೂ ಕೈ ಬಿಟ್ಟರು.

No comments: