Sunday, October 12, 2008

ಹೂವು

ಹೂವು ಎಂದರೆ ಎಲ್ಲರ ಮುಖ್ಯವಾಗಿ ಹೆಂಗಸ ಮುಖ ಅರಳುತ್ತದೆ. ಅದನ್ನು ಮುಡಿದು ಆನಂದ ಪಡಿಯುದರ ಜೊತೆಗೆ ಗಂಡಸರ ಮುಂದೆ ಬೀಗಲು, ಮೆಚ್ಚಿಗೆ ನಿರೀಕ್ಷಿಸುತ್ತ ಆಶಾ ಪ್ರಪಂಚದಲ್ಲಿ ತೇಲಾಡುತ್ತಿರುತಾರೆ.
ಹೂವು ಕಣ್ಣಿಗೆ ಮನೋಹರವಾಗಿರುವಂತೆ ಸುವಾಸನೆಯುಕ್ತಾವಾಗಿ ಮೂಗಿಗೂ ಹಿತವಾಗಿರುತ್ತದೆ. ಅದಕ್ಕೋಸ್ಕರವೇ ಏನೋ ದೇವರ ಒಳ್ಳೆಯ ಸೃಷ್ಟಿಯಾಗಿರುವ ಹೂವನ್ನು ದೇವರಿಗೆ ಅರ್ಪಿಸುವ ಕ್ರಿಯೆಯೇ ಪೂಜೆ ಎಂದನ್ನಿಸಿಕೊಂಡಿತೇನೋ?
ಹೂವನ್ನು ಕೊಂಡುಕೊಂಡು ಪೂಜೆಗೆ ಉಪಯೋಗಿಸಿದರೆ ನಿಮ್ಮ ಧನಶಕ್ತಿಯ ಬಗ್ಗೆ ನಿಮಗೇ ಜಂಭ ಅಹಂಕಾರ ಬರಬಹುದೆಂದು ನೀವೇ ಬೆಳೆದ ಹೂವನ್ನು ಬಳಸಬೇಕು ಎಂದು ಹಿಂದೆ ನಂಬುತ್ತಿದ್ದರು. ಈ ನಂಬಿಕೆ ಬಲದಿಂದಲೇ ಹೂವು ಕೊಂಡು ಪೂಜಿಸುವದು ಸರಿಯಲ್ಲ ಎಂದು ಅರ್ಧ ನಂಬಿ ಪ್ರಾತಃಕಾಲದ ಗಾಳಿಸಂಚಾರ ವೇಳೆಯಲ್ಲಿ ಇತರರ ಮನೆಯಂಗಳದ ಹೂಗಿಡಗಳಿಂದ ಪೂಜೆಗೆ ಹೂವು ಸಂಗ್ರಹಿಸಲು(!) ತೊಡಗಿರುವವರ ಸಂಖ್ಯೆಯೇನು ಕಡೆಮೆಯಿಲ್ಲ. ಈ ಸಂಗ್ರಹಣೆಗೆ ಸಹಕಾರಿಯಾಗಲು ಕೈಗೆಟುಕದ ಹೂಗಳನ್ನು ಕೀಳಲು ಉದ್ದದ ತಂತಿಯ ಕೊಕ್ಕೆಗಳನ್ನು ಜೊತೆಗೆ ಒಯ್ಯುವ ಗಾಳಿಸೇವರನ್ನೂ ನೋಡಿದ್ದೇನೆ.
ನಮ್ಮ ಊರು ಮಾಗಡಿ; ಅಲ್ಲಿನ ರಂಗನಾಥಸ್ವಾಮಿಯ ದೇವಾಲಯಕ್ಕೆ ಹೂವಿನ ಸರಬರಾಜಿಗೋಸ್ಕರವೇ ಕೆಲವು ಹೂವಿನ ತೋಟಗಳಿದ್ದವು. (ಅವು ದೇವಾಲಯಕ್ಕೆ ಸೇರಿದ್ದೊ ಇಲ್ಲ ಯಾರದೋ ಸೇವಾರ್ಥ ದಾನದದ್ದೋ ಈಗ ನನಗೆ ನೆನಪಿಲ್ಲ.) ಆ ತೋಟಗಳಿಂದ ಬೆಳಗಿನ ಜಾವ ಹೂವು ಸಂಗ್ರಹಿಸಿದ ಮೇಲೆ ಪೂಜೆಗೆ ಹೂವು ಬೇಕೆನ್ನುವವರಿಗೆ ತೋಟದ ಒಳಗೆ ಪ್ರವೇಶವಿರುತ್ತಿತ್ತು. (ದೇವಸ್ಥಾನದವರು ಪೂರ್ತಿ ಹೂವು ಕಿತ್ತಿರುತ್ತಿರಲಿಲ್ಲ - ಸಾಧ್ಯವೂ ಇರಲಿಲ್ಲ) ಹಾಗೆ ಉಳಿದ ಹೂವುಗಳನ್ನು ಮನೆಮನೆಗೆ ಸೇರುತ್ತಿತ್ತು. ಅಲ್ಲೂ ಪೂಜೆಗೆ ಉಪಯೋಗವಾತ್ತಿತ್ತು. ಮನೆ ಮನೆಗಳಲ್ಲಿ ಆಗುವ ಪೂಜೆಯೂ ರಂಗನಾಥನ ಪುಜೆಯೆಂದೇ ಆಗಿನ ಕಾಲದ ಭಾವನೆಯಾಗಿತ್ತೇನೋ. ನನಗೆ ನನ್ನ ಬಾಲ್ಯದ ನೆನಪು ಬರುತ್ತದೆ - ಏಕೆಂದರೆ ದೇವಸ್ಥಾನಕ್ಕೆ ಹೂವು ಕಿತ್ತ ಮೇಲೆ ಸಾರ್ವಜನಿಕರಿಗೆ ಇದ್ದ ಅವಕಾಶವನ್ನು ಉಪಯೋಗಿಸಿಕೊಳ್ಳಲು ಸಾಮಾನ್ಯವಾಗಿ ಚಿಕ್ಕ ಹುಡುಗರಿಗೆ ಆದೇಶಿಸುತ್ತಿದ್ದರು - ಆ ಹುಡುಗರುಗಳ ಉದಾಹರಣೆಯಲ್ಲಿ ನಾನೂ ಒಬ್ಬ. ಇದರಲ್ಲಿ ಎರಡು ಉದ್ಧೇಶವಿರುತ್ತಿತ್ತು; ಹೂವು ಸಂಗ್ರಹವಾಗುತ್ತಿತ್ತು; ಹುಡುಗರಿಗೆ ಬೇಗ ಏಳುವ ಅಭ್ಯಾಸ ಕಲಿಸುವುದು.
ಇನ್ನೊಂದು ಸಂಗತಿ ಇಲ್ಲಿ ಹೇಳಬೇಕು. ಇಲ್ಲಿ ಇನ್ನೊಬ್ಬರ ಮನೆಯಂಗಳದಿಂದ ಹೂವು ಸಂಗ್ರಹಿಸಿವುದೇ ಒಂದು ಮಹಾ ಪರಾಕ್ರಮ ಎಂದು ಬಹುತೇಕ ಮಂದಿ ಭಾವಿಸುತ್ತಾರೆ. ಆದಕಾರಣವೋ ಏನೋ ನಮ್ಮ ಸುತ್ತಮುತ್ತ ಗಿಡಗಳಲ್ಲಿ ಹೂವು ಅರಳಿ ದೀರ್ಘಕಾಲ ಗಿಡದಲ್ಲೇ ಬಿಡಲು ನಮಗೆ ಆಗದ ಕಷ್ಟದ ಕೆಲಸ. ಈ ಸನ್ನಿವೇಶದ ಅನುಭವವಿದ್ದ ನನಗೆ ಕ್ಯಾಲಿಫೋರ್ನಿಯಾಕ್ಕೆ ಹೋಗಿದ್ದಾಗ ಅಲ್ಲಿ ರಸ್ತೆಬದಿಯಲ್ಲಿ ಉದ್ದಕ್ಕೂ ಹೂವನ್ನು ಬಿಟ್ಟಿರುವ ಗಿಡಗಳೇ ಗಿಡಗಳನ್ನು ನೋಡಿ ಆನಂದವೋ ಆನಂದ .
ಒಂದು ದಿನ ನಾನು ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿದ್ದಾಗ ಅಲ್ಲಿನ ಗುಲಾಬಿ ತೋಟದಿಂದ ಒಂದು ಹೂವನ್ನು ಯಾರೋ ಕಿತ್ತುಕೊಂಡರು. ಯಾವ ಮಾಯದಿಂದಲೋ ಒಬ್ಬ ಪಾರ್ಕಿನ ನೌಕರ ಬಂದು ಹಿಡಿದು ಬಿಟ್ಟ. ಹೂವು ಕಿತ್ತವರು ಕಾವಲು ಕಡಿಮೆ ಎಂದುಕೊಂದಿದ್ದರೇನೋ!
ಆವಾಗಲೇ ನಾನು ಆಲ್ಲಿ ಈ ಫಲಕ ಹಾಕಿದ್ದಿದ್ದನ್ನು ನೋಡಿದ್ದು. ಎಂಥ ಆಲೋಚನೆ; ಅದನ್ನು ಕೂಗಿ ಹೇಳಲು ಎಂಥಾ ಜಾಗ!



1 comment:

venka said...

ಇದೇ ಸರಳಿಯಲ್ಲಿ - ಸಮಸ್ತ ಸಸ್ಯಜೀವದ ಸಂರಕ್ಷಣೆಗಾಗಿ ಸ್ವಿತ್ಜೆರಲಾನ್ಡ ಸಂನಿದ್ಧ. :

ಇಲ್ಲಿ ನೋಡಿ