Monday, November 24, 2008

ಕನ್ನಡದ ಸಾಹಿತ್ಯ ಕೃತಿಯನ್ನು ಡಿಜಿಟಲೈಸ್ ಮಾಡುವಲ್ಲಿ ನನ್ನ ಅನುಭವ

"ಅಜ್ಜಿ ಎಲ್ಲಿ"
"ಅಡಿಗೆ ಮನೇಲಿ"
"ತಾತ ಎಲ್ಲಿ"
"ಕಂಪ್ಯೂಟರ್ ರೂಂನಲ್ಲಿ"
ಇಷ್ಟು ಇನ್ನೂ ಮೂರು ತುಂಬದಿರುವ ಮೊಮ್ಮಗಳು ಯಾರಾದರು ಕೇಳಿದರೆ ಕೊಡುತ್ತಿದ್ದ ಉತ್ತರಗಳು.
ಈ ಪ್ರಶ್ನೋತ್ತರ ಅಮೇರಿಕಾದ ಕ್ಯಾಲಿಫೋರ್ನಿಯಾದ ಸನ್ನಿ ವೇಲ್‍ಅಪಾರ್ಟ್ಮೆಂಟ್ ಒಂದರಲ್ಲಿ.
ಅಮೇಲೆ ಆ ಮೊಮ್ಮಗಳಿಗೆ ನಾವು ಹೇಳಿಕೊಟ್ಟದ್ದು
"ಶಾಮಣ್ಣ ಯಾರು ಬರೆದದ್ದು"
"ವೀರಭದ್ರಪ್ಪ"
ನಾನು ತಾತ; ನಾನು ಅಮೇರಿಕಾಗೆ ಹೋದಾಗಲೂ ಶಾಮಣ್ಣ ಕಾದಂಬರಿಯನ್ನು `ಡಿಗಿಟಲೈಸ್' ಮಾಡುತ್ತಿದ್ದುದನ್ನು ಮುಂದುವರೆಸಿದ್ದೆ. ಕೆಲಸವೂ ಮುಂದುವರೆಯಿತು ಒಂದು ವಿಧದಲ್ಲಿ ಅಲ್ಲಿಗೆ ಹೋದ ಹಿರಿಯ ನಾಗರೀಕರಿಗೆ ಕಾಡುವ ಒಂಟಿತನದಿಂದ ಮುಕ್ತಿಯೂ ಸಿಕ್ಕಿತು.

`ಡಿಗಿಟಲೈಸ್'ಮಾಡುವುದು ಅಂದರೇನು? ಕನ್ನಡದ ಅಚ್ಚಿನ ಪಠ್ಯವನ್ನು ಇಮೇಜ್ ರೂಪದಲ್ಲಿ ಅಂತರ್ಜಾಲದಲ್ಲಿ ಸೇರಿಸುವುದು ಸುಲಭ ಆದರೆ ಅದಕ್ಕೆ ಹೆಚ್ಚಿನ ಗಾತ್ರದ `ಮೆಮೊರಿ' ಬೇಕಾಗುತ್ತದೆ; ವೆಚ್ಚವಾಗುತ್ತದೆ. ಕನ್ನಡದ ಸಾಹಿತ್ಯಕೃತಿಗಳನ್ನು `ಟೆಕ್ಸ್ಟ್' ರೂಪಕ್ಕೆ ಇಳಿಸಿ ಅಂತರ್ಜಾಲದಲ್ಲಿ ಹಾಕುವುದೆಂದರೆ ಕನ್ನಡಕ್ಕೆ ಒ.ಸಿ.ಆರ್ ತತ್ರಾಂಶ ಇನ್ನೂ ಸುಲಭವಾಗಿ ಲಭ್ಯವಿಲ್ಲ. `ಟೆಕ್ಸ್ಟ್' ರೂಪಕ್ಕೆ ಇಳಿಸಲು ಪ್ರತಿಯೊಂದು ಅಕ್ಷರವನ್ನೂ `ಕೀ'ಮಾಡಬೇಕು. ಇದನ್ನೇ ನಾನು ಮಾಡುತ್ತಿದ್ದುದು. ನಾನು ಕನ್ನಡಸಾಹಿತ್ಯ ಡಾಟ್ ಕಾಂ ರವರು ಹೊರತರುತ್ತಿದ್ದ ಸಂಚಿಕೆಯಲ್ಲಿ ಸೇರಿಸಲು ಶಾಮಣ್ಣ ಕಾದಂಬರಿಯನ್ನು ಕೀ ಮಾಡಲು ಸ್ವಯಂ ಪ್ರೇರಿತನಾಗಿ ಕೆಲಸ ಮಾಡಲು ೨೦೦೬ ರಿಂದ ಪ್ರಾರಂಭ ಮಾಡಿದ್ದು ೨೦೦೮ ರಲ್ಲಿ ಮುಗಿಸಿದೆ. ನಾನು ಈ ಕೆಲಸವನ್ನು ಅಮೇರಿಕಾದಲ್ಲಿಯೂ ಮಾಡುತ್ತಿದ್ದೆ. ಅದರಿಂದಾಗಿ ನನ್ನ ಮಗಳು ಇದು ಮುಗಿದ್ದನ್ನು ತಿಳಿದು ನಿನ್ನ ಅನುವವನ್ನು ಬ್ಲಾಗಿನಲ್ಲಿ ಸೇರಿಸು ಅಂದಳಾದ್ದರಿಂದ ಈ ಬ್ಲಾಗು ಹುಟ್ಟಿದೆ.

ನಾನು ಆಗಾಗ್ಗೆ ಕೆಲವು ಪುಟಗಳನ್ನು ಸ್ಕಾನ್ ಮಾಡಿ ಒ.ಸಿ.ಆರ್‍ಮಾಡಿ `ಟೆಕ್ಸ್ಟ್' ರೂಪದಲ್ಲಿ ಇಮೈಲ್ ಮಾಡುತ್ತಿದ್ದೆ, ಏಕೆಂದರೆ ಈ ರೂಪದಲ್ಲಿ ಕಡತದ ಗಾತ್ರ ಕಡಿಮೆ ಇರುತ್ತದೆ. ಹೀಗಾಗಿ ಕನ್ನಡಕ್ಕೆ ಒ.ಸಿ.ಆರ್ ಇಲ್ಲದಿರುವ ಕೊರತೆ ನನಗೆ ಗೊತ್ತಿತ್ತು. ನಾನು ಗೂಗಲ್‍ನಲ್ಲಿ ಹುಡುಕುತ್ತಿದ್ದಾಗ ಕನ್ನಡಸಾಹಿತ್ಯ ಡಾಟ್ ಕಾಂ ನ ಶೇಕರಪೂರ್ಣ ಅವರು ಕೀ-ಇನ್ ಮಾಡುತ್ತ ಕನ್ನಡ ಸಾಹಿತ್ಯದ ಕೃತಿಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತಿರುವುದರ ಬಗ್ಗೆ, ಕೀ-ಇನ್ ತಂಡದಲ್ಲಿ ಹಲವು ವಾಲಂಟಿಯರುಗಳು ಇದ್ದಾರೆಂದು ಹೇಳಿದ್ದ ಪತ್ರಿಕಾವರದಿ ಕಣ್ಣಿಗೆ ಬಿತ್ತು. ನಾನೂ ಏಕೆ ಇದಕ್ಕೆ ಕೈಗೂಡಿಸಬಾರದೆಂದು ಅನ್ನಿಸಿತು. ನಾನು ಒಂದು ಇ-ಮೈಲ್ ಕಳುಹಿಸಿದೆ. ಅವರು ನನ್ನನ್ನು ಸ್ವಾಗತಿಸಿದರು. ಮತ್ತೆ `ಶಾಮಣ್ಣ' ಕಾದಂಬರಿಯನ್ನು ನನ್ನ ಪಾಲಿಗೆ ಕೊಟ್ಟರು. ಇದು ೫೫೭ ಪುಟಗಳನ್ನು ಒಳಗೊಂಡಿದ್ದರಿಂದ ಪೂರೈಸಲು ಬಹಳ ದಿನಗಳೇ ಹಿಡಿದವು. ನನಗೆ ಕೀಲಿಮಣೆ ಶಾಸ್ತ್ರೀಯವಾಗಿ ಉಪಯೋಗಿಸುವ ಅನುಭವ ಸಾಲದು. ನಾನು ಆಯಾ ಅಕ್ಷರಕ್ಕೆ ನಿಯೋಜಿಸಿದ ಬೆರಳನ್ನೇ ಉಪಯೋಗಿಸುವುದನ್ನು ಕಲಿತಿದ್ದೇನೆ; ಆದರೆ ಅಚ್ಚಿಗಿಳಿಸುವ ಪಠ್ಯದ ಮೇಲೆ ಕಣ್ಣಿಟ್ಟು ಕಿಲಿಮಣೆಯನ್ನು ನೋಡದೆ ಕೀ ಮಾಡಲು ಕಲಿತಿಲ್ಲ. ಆದರೂ ನಾನು ಸಾಕಷ್ಟು ವೇಗವಾಗಿ ಟೈಪ್ ಮಾಡತ್ತೇನೆ. ಪಠ್ಯದ ಮೇಲಷ್ಟೆ ಕಣ್ನಿಟ್ಟು ಟೈಪ್ ಮಾಡಲು ಕನ್ನಡದ ಸಂದರ್ಭದಲ್ಲಿ ಬೇಕಾಗಿಲ್ಲವೇನೋ! ನಾನು ವೃತ್ತಿಯಲ್ಲಿ ದೂರಸಂಪರ್ಕ ಇಲಾಖೆಯಲ್ಲಿ ಇಂಜಿನೀಯರ್ ಆಗಿದ್ದವನು. ನನಗೆ ಕೀಲಿಮಣೆಯಲ್ಲಿ ಕೆಲಸ ಮಾಡುವ ಅವಕಾಶಗಳು ಇರಲಿಲ್ಲ. ಗಣಕಯಂತ್ರ ಉಪಯೋಗಿಸಲು ಅನುಕೂಲವಾಗುವಷ್ಟು ಅಭ್ಯಾಸ ಮಾಡಿಲೊಂಡಿದ್ದೆ. ಕನ್ನಡಸಾಹಿತ್ಯ ಡಾಟ್ ಕಾಂ ನವರು "ಬರಹ" ತತ್ರಾಂಶವನ್ನು ಅವರ ವೆಬ್-ಸೈಟ್ ನಲ್ಲಿ ಬಳಸುತ್ತಾರೆ. ಅದನ್ನು ಉಪಯೋಗಿಸುವ ಅನುಭವ ನನಗೆ ಮೊದಲಿಂದಲೂ ಗೊತ್ತಿತ್ತು. ಅದನ್ನು ನಾನು ಬಳಸುತ್ತಿದ್ದೆ. ಕೆಲವು ಅಸಾಮಾನ್ಯ ಪದಗಳನ್ನು ಕೀ ಮಾಡಲು ಬರಹ ವೆಬ್-ಸೈಟ್‍ನಲ್ಲಿ ಸಹಾಯ ಪಡೆಯುತ್ತಿದ್ದೆ. ನನಗೆ ಈ ಕೆಲಸದಲ್ಲಿ ಆದ ಒಂದು ಮುಖ್ಯವಾದ ಅನುಭವ ಎಂದರೆ ಶಾಮಣ್ಣ ಕಾದಂಬರಿಯಲ್ಲಿ ಕಾದಂಬರಿಕಾರರು ಪಾತ್ರಗಳ ಮೌಖಿಕ ಮಾತುಗಳನ್ನು ಕೀ ಮಾಡಲು ಬಹಳ ಜಾಗರೂಕರಾಗಿರಬೆಕಾಗಿತ್ತು. ಒತ್ತಕ್ಷರಗಳು ಹೆಚ್ಚಿರುತ್ತಿದ್ದವು.
ಉದಾ:ಗೂಳಿ ತನ್ನೊಟ್ಟಿ ತುಂಬಿಸ್ಕನ್ನದಕ್ಕಿಂತ ಬಣವೇನೆಂಳ್ಮಾಡ್ತದೋ ಹಂಗ್ಮಾಡ್ತಾವ ನೋಡು.
Direct speech ನ ಇನ್ನೊಂದು ಉದಾಹರಣೆಯನ್ನು ನೋಡೋಣ. ಸಹಜವಾಗಿ ಕೀ ಮಾಡಿದರೆ "ಗರತೋರೆಲ್ಲ ಗರತೇರ ಕಡೇಕಿರ್ತಾರ... ನಮ್ಮಂಥ ಮೂರ್ಕಾಸಿನ ಸೂಳೇರ್ಕಡೀಕ ಯಾಕಿರ್ತಾರ" ಎಂದು ಕಾಣುತ್ತದೆ. ಆದರೆ ಪಠ್ಯದಲ್ಲಿ ಇರುವ ರೀತಿ

ಈ ರೀತಿಯೇ ಕೀ ಮಾಡಲು ಕ್ರಮ ಇದೆ. ಅದಕ್ಕೆ ಸ್ವಲ್ಪ ಹೆಚ್ಚನ ಶ್ರಮವಹಿಸಬೇಕು, ಅಂದರೆ ಹೆಚ್ಚಿನ ಕೀಗಳನ್ನು ಒತ್ತಬೇಕಾಗುತ್ತದೆ. ಅಲ್ಲದೆ ಸರಾಗವಾಗಿ ಓಡುವ ಕ್ರಮ ಬದಲಾಯಿಸಬೇಕಾಗಿರುವುದರಿಂದ ವೇಗ ಕುಂಠಿತವಾಗುವುದರ ಜೊತೆಗೆ ಮನಸ್ಸನ್ನು ಕೇಂದ್ರಿಕರಿಸಬೇಕಾಗುತ್ತದೆ.
ಕೆಲವು ಪದಗಳನ್ನು ಕೀ ಮಾಡಲು ಅಗುವುದೇ ಇಲ್ಲ.
ಉದಾ:

ಇದಲ್ಲದೆ ಸಾಮಾನ್ಯವಾಗಿ ಗಣಕ ಯಂತ್ರಕ್ಕೆ ಸಂಬಂಧಿಸಂತೆ ಬರುವ ಕ್ಲೇಶಗಳನ್ನು ಹೇಳಬೇಕಂದರೆ, ಕೀ ಮಾಡುತ್ತಿದ್ದಾಗ ಎನೋ ಆಗಿ(!) ಸೇವ್ ಮಾಡುವ ಮುನ್ನವೇ ಅಳಿಸಿಹೋಗಿ ಪುನಃ ಪುನಃ ಮರುಕಳಿಸಿ ಕೀ ಮಾಡುವ ಸಂದರ್ಭಗಳು ಬಂದಿವೆ.

ಕನ್ನಡಸಾಹಿತ್ಯ ಡಾಟ್ ಕಾಂ ಸಂಬಂಧಿಸಿದಂತೆ ಹೇಳಬೇಕೆಂದರೆ, ಒಂದು ಕೃತಿಯ ಪೂರ್ಣ ಕೀ ಆಗದೆ ಅವರು ಅದನ್ನು ಸಂಚಿಕೆಯಲ್ಲಿ ಹಾಕಲು ಪ್ರಾರಂಭಮಾಡುವುದಿಲ್ಲ. ಶಾಮಣ್ಣ ಕಾದಂಬರಿ ಟೆಕ್ಸ್ಟ್ ರೂಪದಲ್ಲಿ ತಯಾರಾಗಲು ೨ ವರ್ಷಗಳಾದವು. ಕೀ ಮಾಡಿದ ನನಗೆ ಅದನ್ನು ಸಂಚಿಕೆಯಲ್ಲಿ ನೋಡುವ ಆಸೆ, ಕುತೋಹಲ, ಮತ್ತು ರೋಮಾಂಚನಗಳನ್ನು ೨ ವರ್ಷ ಅದುಮಿಟ್ಟುಕೊಂಡಿರಬೇಕಾಯಿತು. ಇಷ್ಟರಲ್ಲಿ ಕನ್ನಡಸಾಹಿತ್ಯ ಡಾಟ್ ಕಾಂ‍ನ ಚಟುವಟಿಕೆ ಸ್ವಲ್ಪ ಬೇರೆ ಕಡೆಗೆ ಅಂದರೆ ದೃಶ್ಯ ಮಾಧ್ಯಮಗಳ ಕಡೆ ತಿರುಗಿತು. ಸಂವಾದ ಡಾಟ್ ಕಾಂ ಜನ್ಮತಾಳಿತು. ಹುರುಪುದಾರರು ಅತ್ತ ಕಡೆ ಮನ ಒಲಿಕೆ ತೋರಿದರು. ನವೀನ ಸಂಚಿಕೆಯಲ್ಲಿ ಶಾಮಣ್ಣ ಕಾದಂಬರಿಯ ಮೊದಲ ಕಂತು ಬರಬಹುದು ಎಂದು ನನ್ನ ಆಶಯ.
ಒಂದು ಸಂತೋಷದ ಸಂಗತಿ ಎಂದರೆ ಶೇಕರಪೂರ್ಣ ಅವರು ನನ್ನ ಸ್ವಯಂ ಪ್ರೇರಿತ ಈ ಕಾರ್ಯವನ್ನು ಮೆಚ್ಚಿ ಉತ್ಸಾಹ ತುಂಬುತ್ತಿದ್ದರು. ಅವರು ಒಂದು ಪತ್ರದಲ್ಲಿ ಹ್ಈಗೆ ಬರೆದಿದ್ದರು "ನಿಮ್ಮ ವಯಸ್ಸು ಕೇಳಿದ್ದು ನಮ್ಮಂಥವರು, ಕೊಂಚ ನಾಚಿಕೆಯಿಂದಲಾದರೂ, ಹೆಚ್ಚು ಸೂಕ್ತವಾದ ಆಸಕ್ತಿ, ಸದಾಶಯಗಳಾನ್ನು ಬೆಳೆಸಿಕೊಂಡು, ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿ ಎಂದು. ನಿಜಕ್ಕೂ ನಿಮ್ಮ ಚಟುವಟಿಕೆ ಬೆರಗನ್ನು ಹುಟ್ಟಿಸುವಂತದ್ದು." ಇದು ಸ್ವಲ್ಪ ಹೆಚ್ಚಿನ ಪ್ರಶಂಸೆ ಎಂದು ನನಗೆ ಅನ್ನಿಸಿದರೂ, ನನ್ನ ಹುರುಪನ್ನು ಉಳಿಸಿಕೊಳ್ಳಲು ಅದು ಬಹಳ ಸಹಾಯ ಮಾಡಿತು.

ನಮ್ಮ ಸೇವಾ ಕಾಲದಲ್ಲಿ ನಮ್ಮ ಕಾರ್ಯ ನಿರೀಕ್ಷಣೆಯನ್ನು ಮೇಲಧಿಕಾರಿಗಳು ಟಿಪ್ಪಣಿ (Annual assessment)ಮಾಡಿಡುವಲ್ಲಿ ನಮ್ಮ ಕಾರ್ಯ ಸಾಧನೆಯ ಬಗ್ಗೆ ನಮ್ಮ ಅನಿಸಿಕೆಗಳನ್ನು (self appraisal) ಕೇಳುತ್ತಾರೆ. ಈ ಬ್ಲಾಗನ್ನು ನನ್ನ ಅನಿಸಿಕೆಗಳಂತೆ ತಿಳಿದು ಬರೆದಿದ್ದೇನೆ.

ನನ್ನ ಮಟ್ಟಿಗೆ ನನಗೇನೂ ಶ್ರಮವಾಗಲಿಲ್ಲ, ಬದಲಿಗೆ ನಾನೂ ಒಂದಷ್ಟು ಕನ್ನಡಕ್ಕೆ, ಸಮಾಜಕ್ಕೆ ಕನ್ನಡಸಾಹಿತ್ಯ ಡಾಟ್ ಕಾಂ ಮೂಲಕ ನನ್ನ ಕಾಣಿಕೆಯನ್ನು ಕೊಟ್ಟಿದ್ದೇನೆ ಅನ್ನಿಸಿದೆ. ನಾನು `ಡಿಗಿಟಲೈಸ್' ಮಾಡಿದ ಶಾಮಣ್ಣ ಕಾದಂಬರಿಯ ಸಿ.ಡಿ. ಯನ್ನು ಕನ್ನಡಸಾಹಿತ್ಯ ಡಾಟ್ ಕಾಂ ‍ನ ಸಂಪಾದಕರಾದ ಶ್ರೀ ಶೇಖರಪೂರ್ಣರವರಿಗೆ ಹಸ್ತಾಂತರ ಮಾಡಿದ ಚಿತ್ರವನ್ನು ನನ್ನ ನೆನಪಿಗಾಗಿ ಈ ಕೆಳಗೆ ಹಾಕಿಕೊಂಡಿದ್ದೇನೆ.

3 comments:

Anonymous said...

ಸಾರ್,
ನಿಮ್ಮ ಬಗೆಗೆ ನಾನಾಡಿರುವ ಮೆಚ್ಚುಗೆಯ ಮಾತುಗಳು ನನ್ನ ಮಟ್ಟಿಗೆ ಯಾವುದೇ ಉತ್ಪ್ರೇಕ್ಷೆಯಿಂದ ಕೂಡಿದ್ದಲ್ಲ. ಮಹತ್ತರವಾದ ಕೆಲಸವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ್ದೀರ. ನಿಮ್ಮ ಮನೆಗೆ ಕನ್ನಡಸಾಹಿತ್ಯ.ಕಾಂ ಹುಡುಗರನ್ನು ಕರೆದು, ಪ್ರೀತಿಯಿಂದ ನೀವು ದಂಪತಿಗಳು ಫಲಾಹಾರ, ಕಾಫಿ ನೀಡಿ, ಟೈಪ್ ಮಾದಿದ್ದ ಶಾಮಣ್ಣ ಕಾದಂಬರಿಯ ಸಿ.ಡಿಯನ್ನು ತಯಾರಿಸಿ ಕೊಟ್ಟಿದ್ದೀರ. ಆ ಸಂಧರ್ಭದಲ್ಲಿ ನಾವು ಲೆಕ್ಕ ಹಾಕಿದೆವು: ಪುಟವೊಂದಕ್ಕೆ ೨೬೦೦ ಕ್ಕಿಂತಲೂ ಅಧಿಕ ಬಾರಿ ಕೈಬೆರಳುಗಳು ಕೀ ಬೋರ್ಡ್ ಮೇಲೆ ಓಡಾಡಬೇಕಾಗಿರುತ್ತದೆ. ಶಾಮಣ್ಣ ೫೭೭ ಪುಟಗಳಿವೆ. ೨೬೦೦ ರನ್ನು ೫೭೭ ರಿಂದ ಗುಣಿಸಿದರೆ ಹದಿನೈದು ಲಕ್ಷ ಬಾರಿ ನಿಮ್ಮ ಕೈಬೆರಳುಗಳು ಕೀ ಬೋರ್ಡ್ ಮೇಲೆ ಓಡಾಡಿವೆ. ನನ್ನ ಮೆಚ್ಚಿನ ದಲಿತ ಲೇಖಕ ಕುಂವಿಯ ಕಾದಂಬರಿಯನ್ನು ಸಂಪೂರ್ಣವಾಗಿ ತಪ್ಪಿಲ್ಲದಂತೆ ಕೀ ಇನ್ ಮಾಡಿ, ನೀವು ಎಲ್ಲವನ್ನು ಮೀರಿ ನಮಗೆ ಉತ್ಸಾಹ ತುಂಬುವ ನಿಮಗೆ ೭೪ ವರ್ಷ ಎಂದೆನ್ನುವುದನ್ನು, ಈ ಟಿಪ್ಪಣಿಯನ್ನು ಓದುವ ಇತರ ಓದುಗರು ಓದಿ, ಮೆಚ್ಚಿ ಬೆರಗಾಗುತ್ತಾರೆ, ಒಂದಷ್ಟು ಹನಿ ಉತ್ಸಾಹವನ್ನು ತುಂಬಿಕೊಂಡು ಹೋಗುತ್ತಾರೆ ಎಂದೆನ್ನುವ ಆಶಯ ನನ್ನದು... ಎಲ್ಲವನ್ನು ಮಾಡಬಲ್ಲವರಿಗೆ, ಉತ್ಸಾಹವುಳ್ಳವರಿಗೆ ಉಳಿದಿದ್ದೆಲ್ಲ ಉತ್ಪ್ರೇಕ್ಷೆ ಎಂದೆನ್ನುವುದೂ ಸಹ ವಿನಯವೇ.


ನಿಮ್ಮ ವಿಶ್ವಾಸಿ
ಶೇಖರ್‌ಪೂರ್ಣ

venka said...

ಅಣ್ಣ,
ಹೃತ್ಪೂರ್ವಕ ಅಭಿನಂದನೆಗಳು! ನಿಮ್ಮ ಈ ಸ್ಫೂರ್ತಿದಾಯಕವಾದ ಮಹತ್ಕಾರ್ಯದಿಂದ ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ. We are very proud of your achievement!

- ವೆಂಕ

hamsanandi said...

ನಮಸ್ತೆ - ನಿಮ್ಮನ್ನ ಸಂಪದದಲ್ಲಿ ನೋಡಿದ್ದೆ - ಆದರೆ, ವೆಂಕ ಸೋಮಯಾಜಿ ಅವರ ತಂದೆ ನೀವು ಅಂತ ಗೊತ್ತಿರಲಿಲ್ಲ!