Tuesday, March 30, 2010

ಡಿಜಿಟಲೈಸ್ಡ್ `ಶಾಮಣ್ಣ' ಈಗ ವೆಬ್ನಲ್ಲಿ ಲಭ್ಯ

ನಾನು ಹಿಂದೊಮ್ಮೆ ನನ್ನ ಸಾಹಸದ ಬಗ್ಗೆ ಇಲ್ಲಿ ಬರೆದಿದ್ದೆ. ಅದನ್ನು ಸಂವಾದ ಡಾಟ್ ಕಾಂ ನವರೂ ವರದಿ ಮಾದಿದ್ದರು.

ಕನ್ನಡಸಾಹಿತ್ಯ ಡಾಟ್ ಕಾಂ ನವರು ತಮ್ಮ ವೆಬ್ ಪುಟದಲ್ಲಿ ಇತ್ತೀಚೆಗೆ ನನ್ನ ಕೊಡುಗೆಯನ್ನು ಬೇಕಾದ್ದಕ್ಕಿಂತ ಹೆಚ್ಚಾಗಿಯೇ ಹೊಗಳಿ ಹೀಗೆ ಬರೆದಿದ್ದಾರೆ.
-----------------------------------------------------------------------
ಕೀಲೀಕರಣ ಎಷ್ಟು ಕಠಿಣ ಅಥವ ಸುಲಭ ಎಂದು ಕಂಡುಕೊಳ್ಳಲು ಒಂದು ಸರಳವಾದ ಉಪಾಯ ಮಾಡಿದೆ. ಯು ಆರ್ ಅನಂತಮೂರ್ತಿಯವರ ಪೂರ್ವಾಪರ (೧/೮ ಕ್ರೌನ್?)ದಲ್ಲಿ, ಪೂರ್ತಿ ಅಚ್ಚುಪುಟವನ್ನು ಆಯ್ಕೆ ಮಾಡಿಕೊಂಡೆ (ಬಿಚ್ಚುಕಟ್ಟು: ಪುತಿನರ ರಸಪ್ರಜ್ಞೆ, ಪುಟ ೬೩):

ಹೊಸ ಬಗೆಯಲ್ಲಿ ಸಾಧಿಸಬೇಕಾಗಿದೆ ಎಂದು ಅನ್ನಿಸುತ್ತದೆ. ಇದಾಗದಿದ್ದಲ್ಲಿ ಕಾವ್ಯ ಅದೇ ಹಳೆಯ ಎರಕದಲ್ಲಿ ಹೊಯ್ದು ಸಾಲಭಂಜಿಕೆಗಳಂತಿರುತ್ತದೆ; ಅಥವಾ ಎಡೆತಡೆಯಿಲ್ಲದ ಮಾತಿನ ಸ್ವಪ್ರದರ್ಶನರತಿಯಾಗುತ್ತದೆ. ತನ್ನ ಸ್ವಭಾವದ ಪ್ರದರ್ಶನರತಿಗೆ ತಾನೇ ಮರುಳಾದವನಿಗೆ ‘ಕ್ರಾಂತಿ’ ಎಂಬುದು ಸರ್ವನಾಶದ ಸುಖ ಕೊಡಬಲ್ಲ ಒಂದು ತೀಟೆಯಾಗಿಬಿಡಬಹುದು. ಅವನಿಗೆ ನಿಜವಾಗಿ ಕ್ರಾಂತಿ ಬೇಕಾಗಿಲ್ಲ; ಆದರೆ ತನ್ನ ರೋಷಾವೇಶಗಳನ್ನು ವ್ಯಕ್ತಪಡಿಸಲೊಂದು ನೆವಬೇಕು. ವ್ಯವಸ್ಥೆಯ ಅಗತ್ಯವನ್ನೂ ಬದಲಾವಣೆಯ ಅನಿವಾರ್‍ಯತೆಯನ್ನೂ ಏಕಕಾಲದಲ್ಲಿ ಅನುಭವಿಸುವಾತ ಮಾತ್ರ ಕ್ರಾಂತಿಕಾರಿಯಾಗಬಲ್ಲ. ಕ್ರಾಂತಿಯನ್ನು ಕುರಿತು ಚಿಂತಿಸಬಲ್ಲವರೆಲ್ಲರೂ ಕಾನ್ರಾಡ್‌ನ ‘ದಿ ಸೀಕ್ರೆಟ್ ಏಜೆಂಟ್’ ಓದಬೇಕು. ಅಲ್ಲೊಬ್ಬ ತನ್ನ ಮೈಯ ಮೇಲೆಲ್ಲ ಬಾಂಬುಗಳನ್ನು ಅಡಗಿಸಿಟ್ಟುಕೊಂಡು ತನ್ನನ್ನೂ ತನ್ನ ಸುತ್ತಲಿನವರನ್ನೂ ಏಕಕಾಲದಲ್ಲಿ ಕೊಲ್ಲಬಲ್ಲ ಅರಾಜಕತಾನಾದದ ಉಗ್ರ, ತಪಸ್ವಿಯಿದ್ದಾನೆ. ಅರಾಜಕತಾವಾದಿಗಳ ಸಂಘಲಾಭದ ಮುಖೇನ ಜರ್ಮನರಿಗೆ ಗುಪ್ತಚಾರನಾದವನೊಬ್ಬನೂ ಬರುತ್ತಾನೆ. ಅವನ ಹೆಂಡತಿ ತನ್ನ ಮೂರ್ಖ ತಮ್ಮನೊಬ್ಬನನ್ನು ಅಕ್ಕರೆಯಿಂದ ಸಾಕುತ್ತಿರುವ ಸಂಸಾರಿ ಹೆಣ್ಣು. ದುರ್ಬಲ ಮನಸ್ಸಿನ ಈ ತಮ್ಮನನ್ನು ಅವನ ಕರುಣೆ ಮೀಟಿ, ಉನ್ಮಾದಕ್ಕೆ ಒಳಪಡಿಸಿ, ಅವಳ ಖದೀಮ ಗಂಡ ಬಾಂಬ್‌ಸ್ಪೋಟ್ ಒಂದರಲ್ಲಿ ಅವನನ್ನು ಬಳಸಿಕೊಂಡು ಸಾಯಿಸುತ್ತಾನೆ. ಹೆಂಡತಿ ಪೆದ್ದಳಾದರೂ ಇದನ್ನು ತಿಳಿದೊಡನೆಯೇ ಮಾಂಸ ಕೊಯ್ಯುವ ಅಡಿಗೆ ಮನೆ ಕತ್ತಿಯಿಂದಲೇ ಗಂಡನನ್ನು ಇರಿದು ಸಾಯಿಸುತ್ತಾಳೆ. ಅಸ್ವಸ್ಥ ಪೋಲಂಡಿನ ಕಾನ್ರಾಡ್ ಅರಾಜಕ ಕ್ರಾಂತಿಕಾರತೆಯ ರುಚಿತಿಳಿದಿದ್ದ ಸಂಪ್ರದಾಯವಾದಿ. ಸುಖಜೀವಿಗಳಾದ ಉದಾರವಾದಿಗಳು ತಮ್ಮ ಪಾಪಪ್ರಜ್ಞೆಯಿಂದಾಗಿ ಕ್ರಾಂತಿಯ ಮಾತಾಡುವವರನ್ನು ಬೆಂಬಲಿಸುವುದು; ಮೊಡ್ಡು ಜನರ ಜೀವನಪ್ರೀತಿ ಸತ್ಯನಿಷ್ಠೆಗಳು; ಬಿರುಕುಗಳನ್ನು ಉಪೇಕ್ಷಿಸುವ ವ್ಯವಸ್ಥೆಯ ದಡ್ಡತನ; ವಿನಾಶವನ್ನು ಪ್ರೀತಿಸುವ ಮನೋವ್ಯಾಧಿ ಗ್ರಸ್ತರು ಸಾಮಾಜಿಕ ಅನ್ಯಾಯಗಳನ್ನು ದುರುಪಯೋಗಪಡಿಸಿಕೊಂಡು ಹೇಗೆ ಕಿಚ್ಚೆಬ್ಬಿಸುವುದರಲ್ಲೇ ಆಸಕ್ತರಾಗಿರುತ್ತಾರೆಂಬ ದಿಗಿಲು - ಇವೆಲ್ಲವನ್ನೂ ರಕ್ತಕ್ರಾಂತಿ, ಕೊಲೆ, ಉತ್ಪಾತಗಳ ನಮ್ಮ ಕಾಲಕ್ಕೆ ಅನನ್ಯವೆಂಬಂತೆ ಕಾನ್ರಾಡ್ ಕಾಣಿಸಿದವನು. ವ್ಯವಸ್ಥೆಯ ಪ್ರೀತಿಯನ್ನೂ, ವಿನಾಶದ ಆಕರ್ಷಣೆಯನ್ನೂ ತನ್ನೊಳಗೇ ಕಂಡುಕೊಂಡವನು ಕಾನ್ರಾಡ್. ಆದ್ದರಿಂದಲೇ ಅವನು ಕೊಡುವ ‘ಸ್ವಕೇಂದ್ರ ಮುಕ್ತಿ’ಯ ರಸಪ್ರಜ್ಞೆ ನಮಗೆ ಗಾಢವಾದ ಅನುಭವವಾಗುತ್ತಾದೆ. ಕ್ಲಾಸಿಕಲ್ ಕವಿಗಳು ಮಾತ್ರ ವ್ಯವಸ್ಥೆಯನ್ನೂ ಹೊಗಳಬಲ್ಲವರು. ಉದಾಹರಣೆಗೆ ಪಂಪ ಮತ್ತು ಕಾಳಿದಾಸ. ನಮ್ಮ ಕಾಲದ, ಪ್ರಾಯಶಃ ಅನಿವಾರ್‍ಯದ, ದುರಂತವೆಂದರೆ ಈ ಬದಲಾವಣೆಯ ಯುಗದಲ್ಲಿ ಹುಟ್ಟಿದ ಅತ್ಯುತ್ತಮ ಲೇಖಕರು ಬಿಚ್ಚುವುದರಲ್ಲಿ, ಕೊಳಕನ್ನು ನಾಶಮಾಡುವುದರಲ್ಲಿ, ಹರಿಯುವುದರಲ್ಲಿ ಎಷ್ಟು ಆಸಕ್ತರಾಗಿರುತ್ತಾರೋ, ಅಷ್ಟೇ ಹೊಸ ವ್ಯವಸ್ಥೆಯ ನಿರ್ಮಾಣದಲ್ಲಿ ಆಸಕ್ತರಾಗಿರುವುದಿಲ್ಲ. ತಮ್ಮ ಬರವಣಿಗೆಯ ತೀವ್ರತೆಗಾಗಿ ಅವರು ಈ ಬೆಲೆ ತೆತ್ತಿರುತ್ತಾರೆ. ರಷ್ಯನ್ ಕವಿ ಮಯಾಕೊವೆಸ್ಕಿ ಕ್ರಾಂತಿಪೂರ್ವ ಮತ್ತು ಕ್ರಾಂತಿ ಸಮಯದಲ್ಲಿ ಎಷ್ಟು ಲವಲವಿಕೆಯಿಂದ ದೇಶವನ್ನು ಬಿಗಿದಿದ್ದ ಸರಪಳಿಗಳನ್ನು ಕಡಿದು ಹಾಕಿದನೋ, ಅಷ್ಟೇ ತೀವ್ರವಾಗಿ ಹೊಸ ಉಕ್ಕಿನ ಕಾರ್ಖಾನೆಗಳನ್ನು ತೆರೆಯುವುದರ

- ಈ ಮೇಲಿನ ಕನ್ನಡ ಪಠ್ಯವನ್ನು http://www.webworldindex.com/countcharacters.htmರಲ್ಲಿ ಅಂಟಿಸಿದಾಗ ಪದಗಳ ಮಧ್ಯದ ಜಾಗವನ್ನೂ ಸೇರಿಸಿದಂತೆ ಒಟ್ಟು ೨೫೦೭ ಕ್ಯಾರೆಕ್ಟಾರ್‌ಗಳಿವೆ ಎಂದು ತೋರಿಸಿತು. ಅಂದರೆ, ಭರ್ತಿ ಪುಟವೊಂದನ್ನು ಕೀಲೀಕರಣ ಮಾಡಲು, ೨೫೦೭ ಬಾರಿ ಕೀ ಬೋರ್ಡ್ ಮೇಲೆ ಕೈಬೆರಳುಗಳು ಅಡ್ಡಾಡಬೇಕಾಗುತ್ತದೆ. ಅಂದರೆ ಸುಮಾರು ೬೦೦ ಪುಟ ಕೀಲೀಕರಣ ಮಾಡಲು ೨೫೦೭*೬೦೦=೧೫೦೪೨೦೦ (ಅಂದರೆ ಹದಿನೈದು ಲಕ್ಷ ನಾಲ್ಕು ಸಾವಿರದ ಇನ್ನೂರು ಬಾರಿ ಕೈಬೆರಳುಗಳು ಆಡಬೇಕು), ಸಂಖ್ಯೆಯನ್ನು ನೋಡಿದರೆ ಎಂಥವರನ್ನಾದರೂ ಭಯಭೀತಗೊಳಿಸುತ್ತದೆ. ಯುವಕರಾದರೋ ಅವರವರ ಧ್ಯಾನ-ಆಅಸಕ್ತಿಗಳಿ ಅವರವರಿಗೆ, ಯುವ ವಿವಾಹಿತರಾದರೋ ನೂರಾರು ಗೋಜಲುಗಳು. ವೃದ್ದರಾದರೂ ವ್ಯಾಧಿಗಳು . ನನ್ನ ವಯಸ್ಸು ೫೪. ನನಗೂ ನೂರಾರು ವ್ಯಾಧಿಗಳು. ಕೀ ಬೋರ್ಡ್ ಮೇಲೆ ಕೈಬೆರಳುಗಳು ವಿಶ್ರಾಂತಿ ರಹಿತವಾಗಿ ಆಡಲಾರದು.
*
*
*
ಎಂ ಎನ್ ಸತ್ಯನಾರಾಯಣರಾವ್‌ರನ್ನು ಎಂಎನ್‌ಎಸ್ ಎಂದೇ ಕರೆಯುತ್ತೇವೆ. ಅವರ ವಯಸ್ಸು ೭೪. ಶಾಮಣ್ಣ ಕುಂಇಯವರ ಕಾದಂಬರಿ- ಸುಮಾರು ೬೦೦ ಪುಟಗಳು. (ಪುಸ್ತಕ ಕಣ್ಮರೆಯಲ್ಲಿರುವುದರಿಂದ ಪುಟಗಳ ನಿಖರತೆಯನ್ನು ಖಚಿತಪಡಿಸಿ ಹೇಳುತ್ತಿಲ್ಲ, ಒಟ್ಟಾರೆ ೫೭೦ ರ ಮೇಲೆ). ಇಡಿ ಕೃತಿಯನ್ನು ಕೀಲೀಕರಣಗೊಳಿಸಿದ್ದಾರೆ. ಕಡಿಮೆ ಕಲಸವಲ್ಲ. ಇವರ ಮುಂದೆ ನಾನಂತೂ ಕುಬ್ಜನಾದೆ. ಕೆ‌ಎಸ್‌ಸಿಯ ಮುಂದುವರಿಕೆ ನನ್ನಿಂದ ಅಸಾಧ್ಯ ಎಂದಿರುವಾಗ ಇಂತಹವರ ಇಂತಹ ಕೆಲಸ ನನ್ನನ್ನು ಹುರಿದುಂಬಿಸಿತು. ಉಳಿದವರನ್ನೂ ಹುರಿದುಂಬಿಸುತ್ತದೆ ಎಂದೆನ್ನುವುದು ನನ್ನ ನಿರೀಕ್ಷೆ. ಸಂವಾದ.ಕಾಂ, ಕಬಡ್ಡಿ ಚಿತ್ರದ ಬಗೆಗೆ ಸಂವಾದ ಕಾರ್ಯಕ್ರಮ ಇಟ್ಟುಕೊಂಡಿದ್ದಾಗ ಎಂಎನ್‌ಎಸ್‌ರವರಿಗೆ ಶಾಲು ಹೊದಿಸಿ ಒಂದು ಸಣ್ಣ ಸನ್ಮಾನವನ್ನು ಮಾಡಿದ್ದೆವು. ‘ರಾವ್‌ಜಿ, ಇದಕ್ಕಿಂತಲೂ ಹೆಚ್ಚಿನ ಗೌರವ ನಿಮಗೆ ಸಿಗಬೇಕಾಗಿತ್ತು. ನಮ್ಮ ಮಿತಿಗಳನ್ನು ಅರ್ಥ ಮಾಡಿಕೊಂದಿರುವ ನಿಮ್ಮ ಹೃದಯ ದೊಡ್ಡದು.’ *
---------------------------------------------------------------------------------

ಅದು ಇರಲಿ ಈಗ ಕನ್ನಡಸಾಹಿತ್ಯ ಡಾಟ್ ಕಾಂ ನವರು ಶಾಮಣ್ಣ ಕಾದಂಬರಿಯ ೨೦೦ ಪುಟಗಳ ವೆಬ್ ಆವರ್ತಿಯನ್ನು ಇತ್ತೀಚೆಗೆ ಪ್ರಕಟಿಸಿದ್ದಾರೆ. ಇನ್ನೂ ೪೫೬ ಪುಟಗಳು ಮುಂದಿನ ಆವರ್ತಿಗಳಲ್ಲಿ ಬರಬಹುದು. ಈ ಪುಟಗಳನ್ನು ಓದಲು ಕನ್ನಡಸಾಹಿತ್ಯ ಡಾಟ್ ಕಾಂ ತಾಣಕ್ಕೆ ಹೋಗಿ ನೊಂದಾಯಿಸಿಕೊಂಡು ಓದಬಹುದು.

ನನ್ನ ಕೆಲಸ ಈಗ ಸಾಕಾರವಾದದ್ದು ನನಗೆ ಸಂತೋಷವಾಗಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

3 comments:

venka said...

Congrats, Anna! Very inspiring, indeed!

venka said...

Congrats, Anna! Very inspiring, indeed!

mnsrao said...

ನಾನು ಡಿಜಿಟಲೈಸ್ ಮಾಡಿದ್ದ `ಶಾಮಣ್ಣ' ಕನ್ನಡಸಾಹಿತ್ಯ ಡಾಟ್ ಕಾಂ ನವರು ವೆಬ್^ಗೆ ಏರಿಸಿದ್ದು ನನಗಂತೂ ಒಂದು ಸುವರ್ಣ ಸಂದರ್ಭ. ನಿಮ್ಮ ಕಾಮೆಂಟ್ ಊಟಕ್ಕಿದ್ದ ಉಪ್ಪಿನಕಾಯಿಯಂತೆ.