Sunday, October 16, 2011

ಉಪ ಕಥೆಗಳು

ಉಪ ಕಥೆಗಳು ಎನ್ನುವ ಹೆಸರು ಮುಖ್ಯ ಕಥೆಗಳ ಮಧ್ಯೆ ಅದಕ್ಕೆ ಪೂರಕವಾಗಿ ಬರುವ ಸಣ್ಣ ಕಥೆಗಳು. ಒಮ್ಮೊಮ್ಮೆ ಅವು ಮನದೊಳಗೆ ನಿಂತು ಬಿಡುತ್ತವೆ. ಏಕೆಂದರೆ ಅವು ಸಣ್ಣದಾಗಿದ್ದರೂ ಬಹಳ ಆಕರ್ಷಕ ವಾಗಿರುತ್ತವೆ. ಇತ್ತೀಚೆಗೆ ನಾನು ಒಂದು ಉಪನ್ಯಾಸ ಕೇಳುತ್ತಿದ್ದಾಗ ನನ್ನನ್ನು ಮಾರು ಗೊಳಿಸಿದ ಒಂದು ಅತೀ ಸಣ್ಣ ಉಪಕಥೆ ಇಲ್ಲಿ ಬರೆಯುತ್ತಿದ್ದೀನಿ. ಚಿಕ್ಕ ಮಕ್ಕಳೂ ಬುದ್ಧಿವಂತರಾಗಿರುತ್ತಾರೆಂಬುದನ್ನು ಉದಹರಿಸಲು ಹೇಳಿದ್ದು. ಇನ್ನೂ ವಿದ್ಯುತ್^ಚ್ಛಕ್ತಿ ಇಲ್ಲದ ಮನೆಯೊಂದರಲ್ಲಿ ಒಂದು ಸಂಜೆ ಆ ಮನೆಯ ಹುಡುಗಿ ಅಡಿಗೆ ಮನೆಯಿಂದ ಹಜಾರಕ್ಕೆ ಒಂದು ಹಚ್ಚಿದ ಹಣತೆ ತರುತ್ತಿದ್ದಾಗ ಅಲ್ಲಿದ್ದ ಅಜ್ಜನಿಗೆ ಹುಡುಗಿಗೆ ಬೆರಗು ಮಾಡಬೇಕೆನಿಸಿತು. ನಿನ್ನನ್ನು ಒಂದು ಪ್ರಶ್ನೆ ಕೇಳುತ್ತೇನೆ ನಿನ್ನಲ್ಲಿ ಉತ್ತರ ಇದೆಯೇ ಎಂದ. ಹೂ ಕೇಳು ಎಂದಳು ಹುಡುಗಿ. 'ಈ ದೀಪವನ್ನು ಹೊತ್ತಿಸಿದ ದೀಪ ಮೊದಲು ಎಲ್ಲಿಂದ ಬಂತು - ಹೇಳು ನೋಡೋಣ' ಅಂತ ಕೇಳಿದ ಅಜ್ಜ. ಆ ಹುಡುಗಿ ಒಂದು ಕ್ಷಣ ತಬ್ಬಿಬ್ಬಾದರೂ ಮರು ಕ್ಷಣ ಏನೋ ಹೊಳೆದವಳಂತೆ ಆ ಹಣತೆಯ ದೀಪವನ್ನು ಉಫ್ ಎಂದು ಆರಿಸಿ 'ಈ ದೀಪ ಎಲ್ಲಿಗೆ ಹೋಯಿತೋ ಅಲ್ಲಿಂದ' ಅಂದಳಂತೆ. ನಿಜಕ್ಕೂ ಚುರುಕು ಉತ್ತರ ಅಲ್ವೇ.

No comments: