ನಾನು ಗಣಪತಿ ಹಬ್ಬಕ್ಕೆ ಗಣಪತಿಯನ್ನು ಕೊಂಡುಕೊಂಡು ಬರಲು ಹೋಗಿದ್ದಾಗ ಒಬ್ಬ ಮಿತ್ರರೂ ಅದೇ ಕಾರ್ಯ ನಿಮಿತ್ತ ಪೇಟೆಗೆ ಬಂದಿದ್ದಾಗ ಸಿಕ್ಕಿದ್ದರು. ಗಣಪತಿಗಳ ಮಾರಾಟದ ಅಂಗಡಿಯ ಮುಂದೆ ನಿಂತು ಮೂರ್ತಿಗಳನ್ನು ನೋಡಿ ನೋಡಿ ಆರಿಸಲು ಆಗದೇ ಅವರು ಏನೋ ಪೇಚಾಟದಲ್ಲಿದ್ದಂತೆ ಕಾಣಿಸಿತು. ನನ್ನನ್ನು ನೋಡಿದ ಕೂಡಲೇ ಅವರು ಸ್ವಲ್ಪ ಮುಜುಗರಕ್ಕೆ ಸಿಕ್ಕಿದಂತೆ ವರ್ತಿಸಿದರು ಮತ್ತು ಅಲ್ಲಿಂದ ಬೇರೊಂದು ಅಂಗಡಿಗೆ ಹೋಗಲು ತಯಾರಿ ನಡೆಸಿದ್ದರು. ಅಷ್ಟರಲ್ಲಿ ಏನನಿಸಿತೋ ನನ್ನೊಡನೆ ಹೇಳಲು ಪ್ರಾರಂಭಿಸಿದರು. ‘ನಾನು ಬಹಳ ಹುಡುಕಿದರೂ ತಿಲಕ ಇರುವ ಗಣಪತಿ ಸಿಗುತ್ತಿಲ್ಲ; ಎಲ್ಲಕ್ಕೂ ವಿಭೂತಿ ಇದೆ. ನಮಗೆ ಅದು ಸರಿಹೋಗಲ್ಲ. ಅಂದರು. ಹಾಗೂ ಇದೆಯೇನ್ರಿ ಅಂತ ಕೇಳಿದೆ. ಹೌದು ಹೌದು. ನಾನು ಪ್ರತಿ ವರ್ಷವೂ ಅದನ್ನೇ ಕೊಳ್ಳುವುದು. ಆದರೆ ಮಾರುಕಟ್ಟೆಯಲ್ಲಿ ಅದರ ಸಂಖ್ಯೆ ಕಡಿಮೆ ಅಂದರು. ನನಗೆ ಗಣಪತಿಗೆ ಹಣೆಗೆ ಏನು ಹಚ್ಚಿರಬೇಕೆಂಬುದರ ವಿಷಯ ಅಲ್ಲಿಯವರೆಗೂ ತಿಳಿದಿರಲಿಲ್ಲ. ಅವರು ವೈಷ್ಣವ ಸಂಪ್ರದಾಯದವರು. ಹಾಗಾಗಿ ಅವರಿಗೆ ವಿಭೂತಿ ಆಗಿ ಬರದು.
ಹಬ್ಬದ ದಿವಸ ವ್ರತದ ಕಥೆಯನ್ನು ಓದುತ್ತಿದ್ದಾಗ ಈ ಕೆಳಗೆ ಉದ್ಧರಿಸಿರುವ ಭಾಗ ನನ್ನ ಗಮನಕ್ಕೆ ಬಂತು:
ಅವರವರು ತಮ್ಮ ತಮ್ಮ ಶಕ್ತಿಗನುಸಾರವಗಿ ಭಂಗಾರದಿಂದ ಅಥವ ಬೆಳ್ಳಿ, ತಾಮ್ರಗಳಿಂದ ಗಣಪತಿಯನ್ನು ಮಾಡಿಸಿ ಪೂಜೆಯಾದನಂತರ ಅದನ್ನು ಬ್ರಾಹ್ಮಣನಿಗೆ ದಾನ ಮಾಡತಕ್ಕದ್ದು. ಅಷ್ಟಕ್ಕೂ ಅನುಕೂಲವಿಲ್ಲದವರು ಮಣ್ಣಿನಿಂದ ಗಣಪತಿಯನ್ನು ಮಾಡಿ ಪೂಜಿಸಬಹುದು. ಶಕ್ತಿಯಿದ್ದರೂ ಲೋಭಿತನವನ್ನು ಮಾಡಬಾರದು. ಆ ಗಣಪತಿಯು ಏಕದಂತನೂ ಮೊರದಂತೆ ಅಗಲವಾದ ಕಿವಿಯುಳ್ಳವನೂ ಚತುರ್ಭುಜಗಳಿಂದ ಕೂಡಿದವನೂ ಒಂದು ಕೈಯಿಂದ ಪಾಶವನ್ನೂ ಮತ್ತೊಂದು ಕೈಯಿಂದ ಅಂಕುಶವನ್ನೂ ಬೇರೊಂದು ಕೈಯಿಂದ ಪಾಶವನ್ನೂ ಬೇರೊಂದು ಕೈಯಲ್ಲಿ ಕಡುಬನ್ನೂ ಇನ್ನೊಂದು ಕರದಿಂದ ಅಭಯಮುದ್ರೆಯನ್ನು ಉಂಟಾಗಿರುವಂತೆಯೂ ಇರಬೇಕು.ಈ ರೀತಿಯಾಗಿರತಕ್ಕ ವಿನಾಯಕ ಸ್ವಾಮಿಯನ್ನು ಉತ್ತಮೋತ್ತಮ ಭಕ್ತಿಯಿಂದ ಆರಾಧಿಸಬೇಕು
(ಆಧಾರ: ‘ವ್ರತಮಾಲಾ’ ಪ್ರಕಟಣೆ: ಶ್ರೀ ಸರಸ್ವತಿ ರತ್ನಾಕರ ಬುಕ್ ಡಿಪೋ ಅವೆನ್ಯೂ ರಸ್ತೆ ಬೆಂಗಳೂರು-೨)
ಅದೇಕೋ ಗ್ರಂಥಕರ್ತರು ಲಲಾಟ ಲಾಂಛನದ ಬಗ್ಗೆ ಗಮನಿಸಿಲ್ಲ.
ಈಗ ನಿಯಮಗಳನ್ನು ಗಾಳಿಗೆ ತೂರಿಬಿಟ್ಟು ಗಣೇಶನಿಗೆ ಏನೇನೋ ರೂಪ ಕೊಟ್ಟು ತಮ್ಮ ಕಲಾ ಕೌಶಲ್ಯವನ್ನು ಕುಶಲ ಕರ್ಮಿಗಳು ತೋರಿಸುತ್ತಿದ್ದಾರೆ. ನಮ್ಮ ನಮ್ಮ ಅವಶ್ಯಕತೆ ನಮಗೆ ಅಷ್ಟೇ.
No comments:
Post a Comment