Monday, May 25, 2020

ಬೇಡ ಅನ್ನಬೇಡ

ಬೇಡ ಅನ್ನಬೇಡ
ಲೇಖಕ: ಎಮ್‌.ಎನ್‌.ಸತ್ಯನಾರಾಯಾಣರಾವ್‌
(೧೧೮೭, ೩೫ನೇ ಸಿ ಅಡ್ಡರಸ್ತೆ, ೪ನೇ ಟಿ ಬ್ಲಾಕ್‌, ಜಯನಗರ, ಬೆಂಗಳೂರು-೪೧)

ನಾನು ಎಲಿಜಬಲ್‌ ಬ್ಯಾಚುಲರ್‌ ಆಗಿದ್ದಾಗ ಕೆಲಸದಲ್ಲಿದ್ದುದು ನಮ್ಮ ತಂದೆ ತಾಯಿಗಳಿದ್ದ ಊರಿನಲ್ಲಿ ಅಲ್ಲ; ಬೇರೆ ಊರಿನಲ್ಲಿ. ಅಲ್ಲಿ ನನಗೆ ಕೊಠಡಿ ಬಾಡಿಗೆ ಕೊಟ್ಟವರು ಯಾರೋ ಅಲ್ಲ; ಅವರ ಬಂಧು ಒಬ್ಬ ನನ್ನನ್ನು ಬಹು ಕಾಲದ ಪರಿಚಯದ ಮೇಲೆ 'ಇವರು ಸಭ್ಯರು' ಎಂದು ಪ್ರಮಾಣ ಪತ್ರ ಕೊಟ್ಟ ಮೇಲೆ  ಬ್ಯಾಚುಲರ್‌ ಆಗಿದ್ದ ನನಗೆ ಕೊಠಡಿ ಬಾಡಿಗೆ ಕೊಡಲು ಒಪ್ಪಿದ್ದು. ನಾನು ಎಷ್ಟು ಸಭ್ಯನಾಗಿ ಅವರಿಗೆ ಕಂಡೆನೆಂದರೆ, ಅವರ ಮಗಳಿಗೆ ನಾನು ತಕ್ಕ ವರ ಎನ್ನಿಸಿ ಬಿಟ್ಟಿತು. ಇನ್ನೊಂದು ಕಾರಣ ಎಂದರೆ ನಾನು ಇದ್ದ ನೌಕರಿ ನಿಜವಾಗಿಯೂ ಸಣ್ಣದಲ್ಲ. ತಕ್ಕಷ್ಟು ಸಂಬಳ ಮುಂದೆ ಹೆಚ್ಚಿನ ಭಡ್ತಿ ಸಿಗುವ ನಿರೀಕ್ಷೆ ಇತ್ತು. ಅವಿರಿವರನ್ನು ವಿಚಾರಿಸಿ ಅವರಿಗೆ ಖಾತ್ರಿ ಆದಮೇಲೆ ಮಗಳಿಗೆ ತಕ್ಕ ವರ ಎಂದು ತೀರ್ಮಾನಿಸಿದರು. ಅವರು ಜೀವನ ಶೈಲಿ ಆಸ್ತಿ ನಿರ್ವಹಣೆ ಅಷ್ಟೇ. ದೊಡ್ಡ ಕುಳವೇ ಹೌದು. ಈನಪ್ಪಾ ಅಂದರೆ ನೌಕರಿ, ಸಂಬಳ ಇದರ ಪರಿಚಯ ಅವರಿಗೆ ಇರಲಿಲ್ಲ. ಆದರೂ ಬಹಳ ತೊಯ್ದಾಟವಾದಮೇಲೆ ಕಷ್ಟಪಟ್ಟು ಮುಂದುವರಿಯಲು ತೀರ್ಮಾನಿಸಿರು. ಒಂದು ದಿನ ಅಕಸ್ಮಿಕವಾಗಿ ನನ್ನ ಎದುರಾದಾಗ ನನ್ನ ತಮ್ಮ ನಿಮ್ಮ ತಂದೆ ತಾಯಿ ಇರುವ ಊರಿಗೆ ಕೆಲಸದಮೇಲೆ ಹೋಗಲಿದ್ದಾನೆ, ಹಾಗೆಯೇ ನಿಮ್ಮ ಮನೆಗೆ ಹೋಗಿ ಅವರನ್ನು ಭೇಟಿ ಆಗಿ ಯೋಗಕ್ಷೇಮ ವಿಚಾರಿಸಲು ಹೇಳುತ್ತೇನೆ, ಅವರ ಅಡ್ರೆಸ್‌ ಕೊಡಿ ಎಂದರು. ನಾನು ಕೊಟ್ಟೆ, ಕೆಲ ದಿವಸಗಳ ನಂತರ ನಾನು ಊರಿಗೆ ಹೋದಾಗ ನನ್ನ ತಂದೆ ಇವರ ತಮ್ಮ ಬಂದಿದ್ದು ನಮ್ಮ ಆಗು ಹೋಗುಗಳ ಬಗ್ಗೆ ಲೋಕಾಭಿರಾಮವಾಗಿ ಮಾತನಾಡಿದ್ದನ್ನು ಹೇಳಿದರು. ಅಷ್ಟೆ, ಮುಂದಕ್ಕೆ ಅವಳ ಮದುವೆ ವಿಷಯ ಬೇರೆ ತಿರುವು ಪಡೆದಿತ್ತು. ಸಂಬಂಧ ಹುಡುಕಿ ಮದುವೆ ಮಾಡೇಬಿಟ್ಟರು. ಆಮೇಲೆ ತಿಳಿಯಿತು ನಮ್ಮ ಸಂಸಾರದ ಆಸ್ತಿ-ಪಾಸ್ತಿ ತೀರ ಕೆಳ ಮಟ್ಟದ್ದು. ನನ್ನ ನೌಕರಿ ಅದರ ದೊಡ್ಡಸ್ತಿಕೆಗಿಂತ ಆಸ್ತಿಯ ಅಳತೆ ಮೇರೆಗೆ ತೀರ್ಮಾನ ಬದಲಾಯಿಸಿದರು ಎಂದು. ನಾನು ಬೇಡವಾದೆನು. ನನಗೆ ಏನೂ ಬೇಸರವಾಗಲಿಲ್ಲ. ನನ್ನ ದಿನಚರಿಯಲ್ಲಿ ಬರೆದೆ 'ನ-ಪಾಸ್‌'. ನನ್ನದು ಹಾಗಿರಲಿ, ಅವರದು 'ಪಾಸ್‌'.  ವರನನ್ನು ಹುಡುಕುವ ಪಟ್ಟಿಯಲ್ಲಿ ನಾನೂ ಇದ್ದೆ ಅನ್ನುವುದು ಒಂದು ಸಂಗತಿ. ಮುಂದೆ ಆ ಕನ್ಯೆಗೆ ಬೇರೊಬ್ಬರನ್ನು ಗೊತ್ತು ಮಾಡೇ ಬಿಟ್ಟರು.

ಹೀಗೇ ನಮ್ಮ ಊರಿಗೆ ಆಗಾಗ್ಗೆ ಹೋಗಿ ಬರುತ್ತಿದ್ದುದು ಇತ್ತು. ಒಂದು ಸಾರಿ ಊರಿಗೆ ಹೋಗಿದ್ದಾಗ ನಮ್ಮ ತಾಯಿ ಒಬ್ಬರು ಹೆಣ್ಣು ಪ್ರಸ್ತಾಪ ಮಾಡಿದ್ದಾರೆ, ಹೋಗಿ ನೋಡೋಣವೇ ಎಂದು ದನಿ ಗೂಡಿಸಿದರು. ಇಷ್ಟವಿದ್ದರೂ ಬಿಗುಮಾನದಿಂದಲೇ ಹ್ಹೂ ಅಂದೆ. ಹೆಣ್ಣು ನೋಡಲು ಅವರ ಮನೆಗೆ ನಾವೆಲ್ಲಾ ಹೋಗಿದ್ದಾಯಿತು. ಅಲ್ಲಿ ಉಪಹಾರ ಹಾಡು ಇವುಗಳ ಸಂಪ್ರದಾಯದ ನಡುವಳಿಕೆ ಆದಮೇಲೆ ನಮ್ಮ ಅಭಿಪ್ರಾಯ ಕೇಳಿದರು. ಅಮೇಲೆ ತಿಳಿಸುತ್ತೇವೆಂದು ಹೊರಟು ಬಂದೆವು. ನಾನು ಹಿಂದಿರುಗುವ ದಿನ ಟ್ರೇನ್‌ ಹತ್ತಿ ಕುಳಿತಿದ್ದೇನೆ. ನನಗೆ ಆಶ್ಚರ್ಯ ಅಂದರೆ ಹಿನ್ನೆಯೇ ನೋಡಿದ್ದ ಹುಡುಗಿಯ ಅಣ್ಣಂದಿರು ಹಾಜರ್‌. ನಿಮ್ಮ ಅಭಿಪ್ರಾಯ ಕೇಳಲು ಬಂದಿದ್ದೇವೆ ಅಂದರು. ಈ ವಿಷಯದಲ್ಲಿ ನಮ್ಮ ಹಿರಿಯರನ್ನು ಸಂಪರ್ಕಿಸಿ; ನಾನು ಹೇಳಬಾರದು ಅಂದೆ. ಅವರು ಒತ್ತಾಯ ಮಾಡುತ್ತಲೇ ಇದ್ದರು. ಸ್ವಲ್ಪ ಬಣ್ಣ ಕಡಿಮೆ ಅಷ್ಟೇ; ಉಳಿದಿದ್ದು ಎಲ್ಲಾ ಚೆನ್ನಾಗಿಯೇ ಇದೆ. ಪದವೀಧರೆ, ಹಾಡು, ಹಸೆ, ಅಡಿಗೆ ಎಲ್ಲದರಲ್ಲೂ ಕಡಿಮೆ ಇಲ್ಲ ಎಂದು ಪುನರುಚ್ಚರಿಸಿದರು. ( ಬಣ್ಣ ಕಡಿಮೆ ಆದ್ದರಿಂದಲೇ -- ಎಲ್ಲಿ ನಮ್ಮ ಮಕ್ಕಳೂ ಹಾಗೆ ಆಗಿ ನಾವು ಅವರ ಮದುವೆ ಮಾಡಲುಪೇಚಾಟ ಪಡಬೇಕಾಗುತ್ತದೆಂದು-- ಭಯ, ನಮ್ಮ ತಾಯಿ ಸ್ಫುರದ್ರೂಪಿ ತಂದೆ ಕಟ್ಟು ಮಸ್ತು ಆದರೆ ಅವರದು ಚಿಗುಳಿ-ತಂಬಿಟ್ಟಿನ ಸಾಮ್ಯ. ಹೀಗಾಗಿ ನಮ್ಮ ಅಕ್ಕ-ತಂಗಿಯರು ಅಣ್ಣ-ತಮತಮ್ಮಂದಿರಲ್ಲಿ ಒಬ್ಬರ ತಪ್ಪ ಒಬ್ಬೊಬ್ಬರು ತಿಳಿ ಇನ್ನೊಬ್ಬಬ್ಬರು ಅಷ್ಟಕ್ಕಷ್ಟೇ!). ಮುಂದಿನದನ್ನು ಹಿರಿಯರಲ್ಲಿ ವಿಚಾರಿಸಿ ಎಂದು ಕೈತೊಳೆದುಕೊಳ್ಳಲು ಪ್ರಯತ್ನಿಸಿದೆ. ಬಿಡಲೇ ಇಲ್ಲ. ನಿಮಗೆ ಒಪ್ಪಿಗೆ ಇದ್ದರೆ ನಾವು ಮುಂದುವರೆಯುತ್ತೇವೆ ಇಲ್ಲದಿದ್ದರೆ ಇಲ್ಲ ಎಂದು ಬಲವಂತ ಮಾಡಿದರು. ನನಗೂ ಮುಜುಗರವಾಗಿ ಹುಡುಗಿ ನನಗೆ ಒಪ್ಪಿಗೆ ಬರಲಿಲ್ಲ ಎಂದು ಹೇಳಿಬಿಟ್ಟೆ. ಥ್ಯಾಂಕ್ಸ್‌ ಹೇಳಿ ಹೊರಟುಹೋದರು. ಹುಡುಗಿ ಅವಳ ದಿನಚರಿಯಲ್ಲಿ 'ನ-ಪಾಸ್‌' ಎಂದು ಬರದುಕೊಂಡಳೋ ಏನೋ!

ಇನ್ನೆಲ್ಲಿ ಇನ್‌ಎಲಿಜಬಲ್‌ ಬ್ಯಾಚುಲರ್‌ ಆಗಿಬಿಡುತ್ತೇನೋ ಎಂಬ ಯೋಚನೆಯಲ್ಲಿ ದಿನ ಕಳೆಯುತ್ತಿದ್ದಾಗ ಇನ್ನೊಂದು ಕರೆ ಬಂತು, ಯಾವುದಕ್ಕೂ ದುಡುಕಬಾರದೆಂದು ಜಾಗರೂಕತೆಯಿಂದ ಇರಲು ತೀರ್ಮಾನಿಸಿದ್ದೆ. ಹುಡುಗಿ ೧೮ ತುಂಬಿದಮೇಲೆ ಗಂಡು ಹುಡುಕಲು ಪ್ರಾರಂಭಿಸಿದ್ದರು. ತೆಳ್ಳಗೆ ಬೆಳ್ಳಗೆ ಇದ್ದಳು. ಎಲ್ಲರಿಗೂ ಒಪ್ಪಿಗೆ ಆಯಿತು. ಹೆಣ್ಣಿನ ಕಡೆಯವರಿಗೆ ನಾನು ಸ್ವಲ್ಪ ಕಡಿಮೆ ಉದ್ದ ಅನ್ನಿಸಿತೇನೋ, ಹುಡುಗಿಯ ಅಣ್ಣ ನನ್ನ ಪಕ್ಕದಲ್ಲಿ ಬಂದು ಬಂದು ನಿಂತುಕೊಳ್ಳುತ್ತಿದ್ದರು. ನನ್ನ ಎತ್ತರ ಅಂದಾಜಿಸಲು ಪ್ರಯತ್ನಿಸುತ್ತಿದ್ದರೆಂದು ಕಾಣಿಸುತ್ತದೆ. ಆಮೇಲೆ ತಿಳಿಯಿತು; ಗಂಡು-ಹೆಣ್ಣು ಒಂದೇ ಎತ್ತರವಿರಬಹುದು ಎಂದು ಅನ್ನಿಸಿತಂತೆ. ನನ್ನ ಇನ್ನೆಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮದುವೆಗೆ ಒಪ್ಪಿದರಂತೆ. ಬೇಡ ಅನ್ನುವುದು ಬೇಡ ಅನ್ನಿಸಿರಬೇಕು. ಇಬ್ಬರೂ 'ಪಾಸ್‌'

ನಾವಿಬ್ಬರೂ ಈಗ ಗಂಡ-ಹೆಂಡತಿಯರು. ಒಂದು ಸರ್ತಿ ಹೆಂಡತಿಯನ್ನು ಕೇಳಿದೆ, ನಮ್ಮ ಎತ್ತರ ಸಾಮ್ಯ ನಿನಗೆ ಹೇಗನಿಸುತ್ತದೆ ಎಂದು. ಅವಳು ನಕ್ಕುಬಿಟ್ಟಳು. ಆಗಲೇ ಯೋಚಿಸಲಿಲ್ಲ.ಈಗ ಯಾಕೆ ಯೋಚನೆ ಅಂದಳು. ಅದೂ ಅಲ್ಲದೆ ಹುಡುಗಿಯರು ಗಂಡನ್ನು ಇಷ್ಟವಿಲ್ಲ ಎಂದು ಹೇಳುವುದು ಸಾಧ್ಯ ಎಂದು ನನಗೆ ಗೊತ್ತೇಇರಲಿಲ್ಲ. ದೊಡ್ಡವರ ತೀರ್ಮಾನಕ್ಕೆ ತಲೆ ಬಾಗಿಸಬೇಕೆಂಬುದು ಅಷ್ಟೇ ನನಗೆ ಗೊತ್ತಿದ್ದಿದು ಎಂದಳು. ಇಷ್ಟಕ್ಕೇ ನಿಲ್ಲಲಿಲ್ಲ ಇದು, ನಿಮಗೇನನ್ನಿಸಿತು ಎಂದು ಮರು ಪ್ರಶ್ನೆ ಮಾಡಿದಳು. ನನಗೆ ಏನೂ ಕೊರೆಇಲ್ಲ, ಆದರೆ ನಾವಿಬ್ಬರೂ ಜೊತೆಯಲ್ಲಿ ಹೋಗುತ್ತಿದ್ದಾಗ ಜನ ನಮ್ಮನ್ನು ಕುತೋಹಲದಿಂದ ನೋಡುತ್ತಾರೆನ್ನಿಸಿದೆ ಅಂದೆ. ಅವರುಗಳ ಅನ್ನಿಸಿಕೆ ನಮಗೇಕೆ ಎಂದಳು ನನ್ನವಳು.

ಎಷ್ಟು ಸಾರಿ ಬೇಡವೆನ್ನುವುದು. ಅದಕ್ಕೆ ಅಂತ್ಯ ಹೇಳುವಾಗ ಆದದ್ದು ಆಗಲಿ ಎಂದು ಮುಗಿಸಿಬಿಟ್ಡಿದ್ದೆ.  No comments: