Sunday, May 4, 2008

ತಿರುಪತಿ ಕ್ಷೌರ

ತಿರುಪತಿ ಕ್ಷೌರ
ಇದು ಈಗ ಒಂದು ನುಡಿಗಟ್ಟಿನಂತೆ ಪ್ರಯೋಗವಾಗುತ್ತಿದೆ.

ಇರಲಿ ಇದರ ಅರ್ಥ ಏನು? ಇರಬಹುದಾದ ಅರ್ಥದ ಐಛ್ಛಿಕ ಉತ್ತರಗಳನ್ನು ಗುರಿತಿಸೋಣ
೧. ತಿರುಪತಿಯಲ್ಲಿ ದೇವರಿಗೆ ಮುಡಿಪಾಗಿತ್ತಿರುವ ಕೂದಲನ್ನು ಕ್ಷೌರ ಮಾಡಿಸಿಕೊಳ್ಳುವುದು.
೨. ಯಾವುದಾದರೊಂದು ಕೆಲಸ ಪ್ರಾರಂಭಿಸಿ ಅರ್ಧಂಅರ್ಧದಲ್ಲಿ ನಿಲ್ಲಿಸಿ ಮುಗಿಸಲು ಬಹಳ ವೇಳೆ ತೆಗೆದುಕೊಳ್ಳುವುದು.
೩. ಯಾವುದಾದರೊಂದು ಕೆಲಸಮಾಡುವಾಗ ನೋವಾಗುವುದು.
೪. ಗೋಕುಲಾಷ್ಟಮಿಗೂ ಇಮಾಂ ಸಾಹೇಬರಿಗೂ ಏನು ಸಂಬಂಧ ಎನ್ನುವುದಕ್ಕೆ ವಿರುದ್ಧ ಹೇಳಿಕೆ.

ಈಗ ಸ್ವಲ್ಪ ವಿವರಕ್ಕೆ ಹೋಗೋಣ:
೧.ಹರಕೆಗಾಗಿ ಮುಂಡನ ಮಾಡಿಸಿಕೊಳ್ಳುವರಲ್ಲಿ ತಿರುಪತಿ ತಿಮ್ಮಪ್ಪನ ಭಕ್ತರು ಬಹಳ ಮುಂದು. ಹೆಚ್ಚಾಗಿ ಆಂಧ್ರದಲ್ಲಿ ನೋಡುವಂಥದು ಅಂದರೆ ಅಲ್ಲಿ ಮುಂಡನ ಮಾಡಿಸಿಕೊಳ್ಳುವವರ ಸಂಖ್ಯೆ (ಎಲ್ಲ ವಯಸ್ಸಿನವರೂ, ಹೆಂಗಸರೂ ಕೂಡ) ಬಹಳ. ಅಲ್ಲದೆ ಒಬ್ಬೊಬ್ಬರು ಆಗಿಂದಾಗ್ಗೆ ಹರಕೆ ಹೊರುತ್ತಾರೆ. ಅಂದರೆ ಕೆಲವರನ್ನು ಪದೇ ಪದೆ ಬೋಳುತಲೆಯಲ್ಲಿ ನೋಡಬಹುದು. ಆದ್ದರಿಂದ ತಲೆ ಬೋಳಾಗಿದ್ದರೆ ತಿರುಪತಿ ಕ್ಷೌರ ಎನ್ನುತ್ತಾರೆ.
೨.ತಿರುಪತಿಯಲ್ಲಿ ಹರಕೆಗಾಗಿ ಮುಂಡನ ಮಾಡಿಸಿಕೊಳ್ಳುವವರನ್ನು ಅಲ್ಲಿನ ಕ್ಷೌರಿಕರು ಗಿರಾಕಿಯನ್ನು ಹಿಡಿದಿಟ್ಟುಕೊಳ್ಳಲು ತಲೆಕೂದಲಿಗೆ ಒಂದು ಸಾರಿ ಕತ್ತಿಯನ್ನು ಸವರಿ ಒಂದು trade mark ಬರೆಯಂತೆ ಕೂದಲನ್ನು ತೆಗೆದು ಮತ್ತೊಂದು ಗಿರಾಕಿ ಹುಡುಕಲು ಹೊರಟು ಹೋಗಿ ನಿಮ್ಮನ್ನು ಕಾಯಿಸುವರೀತಿಯಂತೆ ನಿರೀಕ್ಷಣೆಮಾಡುವ ಸನ್ನಿವೇಶ.
೩. ‘ನೀರಿಲ್ಲದ ಕ್ಷೌರ’ ಎನ್ನು ಇನ್ನೊಂದು ನುಡಿಗಟ್ಟಿನ ಅರ್ಥದಂತೆ ನಿಗದಿತ ರೀತಿ ಬಿಟ್ಟು ಅಡ್ಡಾದಿಡ್ಡಿ ಕೆಲಸ ಮಾಡಿದರೆ ನೋವಾಗುತ್ತದಲ್ಲ ಅದು.
೪. ಅಂದರೆ ತಿರುಪತಿಗೂ ಕ್ಷೌರಕ್ಕೂ ಸಂಬಂಧ ಇದೆ ಎನ್ನುವಂತೆ ಯಾವುದಾದರೂ ಉಲ್ಲೇಕಿಸಿದ ಎರಡಕ್ಕೆ ಸಂಬಂಧ ಇದೆಎಂದು.

ಈ ಐಛ್ಛಿಕ ಉತ್ತರಗಳನ್ನು ಮತ್ತು ವಿವರಗಳನ್ನು ಹೆಣೆಯುವಲ್ಲಿ ಒಂದು ಸರಿ ಕೆಲವು ಸರಿಯಂತೆ ಕಾಣುವಂತೆ, ಕೆಲವು ಅಸಂಬದ್ಧತೆಯಿಂದ ಕೂಡಿದಂತೆ ಇರಬೇಕು.

ಸರಿಯಾದ ಉತ್ತರಕ್ಕೆ ಮುಂದೆ ಓದಿ.

ಒಂದು ಕಥೆ ‘ತಿರುಪತಿ ಕ್ಷೌರ’ ಅಂತ ಬಹಳ ಹಿಂದೆ ಓದಿದ್ದೆ. ಅದರಲ್ಲಿ ಬಹಳ ಸ್ವಾರಸ್ಯಕರವಾಗಿ ತಿರುಪತಿಯಲ್ಲಿ ಹರಕೆ ಹೊತ್ತವರು ತಲೆಕೂದಲನ್ನು ಕ್ಷೌರಿಕರಿಂದ ತೆಗೆಸಲು ಅನುಭವಿಸಬಹುದಾದ ಅವಸ್ಥೆಯನ್ನು ವಿವರಿಸಿದ್ದರು. ಕ್ಷೌರಿಕರು ಗಿರಾಕಿಯನ್ನು ಹಿಡಿದು ನಿಗಧಿ ಪಡಿಸಿಕೊಳ್ಳಲು ತಲೆಗೆ ಒಂದು ಸಾರಿ ಕತ್ತಿಯನ್ನು ಸವರಿ ಒಂದು trade mark ಬರೆ ಎಳೆದು ಮತ್ತೊಂದು ಗಿರಾಕಿ ಹುಡುಕಲು ತೊಡಗುತ್ತಿದ್ದರಂತೆ. ಇದೇತರಃ ಬಹಳ ಗಿರಾಕಿಗಳ ಸಾಲುಗಳು. (ಒಂದೇ ಸಾಲಲ್ಲ, ಅನೇಕ ಸಾಲುಗಳು -- ಒಬ್ಬ ಕ್ಷೌರಿಕನಿಗೆ ಒಂದು ಸಾಲು). ನೀವು ಮತ್ತೊಬ್ಬ ಕ್ಷೌರಿಕನನ್ನು ಹಿಡಿಯುವ ಹಾಗಿಲ್ಲ; ನಿಮ್ಮ ತಲೆಯ ಮೇಲಿರುವ trade mark ನೋಡಿ ಮತ್ತ್ಯಾವ ಕ್ಷೌರಿಕನೂ ನಿಮ್ಮನ್ನು ಮುಟ್ಟುವುದಿಲ್ಲ. ಮುಟ್ಟಿದರೆ ಮುಗಿಯಿತು. ವೃತ್ತಿ ಯುದ್ಧ ಶುರು. ನೀವು ನಿಮ್ಮ ಸರದಿಗೆ ಕಾಯಲೇ ಬೇಕು. ಈ ಕಾಯುವಿಕೆಯ ಸಮಯದಲ್ಲಿ ಯಾಕಪ್ಪಾ ಈ ಹರಕೆ ಹೊತ್ತೆ ಎಂದುಕೊಂಡು ಕಸಿವಿಸಿಗೊಳ್ಳುತ್ತಾರೆ. ವಿಧಿ ಇಲ್ಲ. ಈಗ ಅದನ್ನು ಮುರಿಯಲು ನಿರ್ಧರಿಸಿದರೂ ಎದ್ದು ಬರಲು ಸಾಧ್ಯವಿಲ್ಲ. trade mark ಹೊತ್ತು ಬದುಕಲು ಸಾಧ್ಯವೇ? ಅದಕ್ಕೇ ತಿರುಪತಿ ಕ್ಷೌರ ಅಂದರೆ ೨ಯ ಉತ್ತರ ಸರಿ.


ಇದೇನಪ್ಪ ಮುಂಡನದ ತೊಗೊಂಡಿದಾನೆ ಬ್ಲಾಗ್ ಬರೆಯೋದಕ್ಕೆ ಅಂದುಕೊಂಡೀರ; ಈ ವಿಷಯನೂ ಸೀರಿಯಸ್.
ಮುಂಡನ ಅಂದರೆ ತಲೆಯ ಕೂದಲನ್ನು ಸಂಪೂರ್ಣ ತೆಗೆಯುವುದು. ಇದು ಹಲವು ಕಾರಣಗಳಿಗಾಗಿ: ೧) ಹರಕೆ ಹೊತ್ತಿದ್ದರೆ ಅಂದರೆ ದೇವರು ನಿಮ್ಮ ಆಶೋತ್ತರಗಳನ್ನು ನೆರವೇರಿಸಿದರೆ ಅದರ ಕೃತಜ್ಙತೆಗೆ. ೨) ಆಕರ್ಷಣೆ ತಡೆಯಲು-ಉದಾ:ವಿಧವೆಯರು (ಈಗಲ್ಲ-ಹಿಂದಿನ ಕಾಲದಲ್ಲಿ) ೩) ದೀನತೆಯ ಕುರುಹು-ಉದಾ:ಬೌದ್ಧ ಭಿಕ್ಷುಗಳು ೪)ಸೂತಕ ಕಳೆದು ಕೊಳ್ಳಲು- ಉದಾ:ಮನೆಯಲ್ಲಿ ಯಾರದರೂ ಅವಸಾನವಾಗಿದ್ದರೆ. ೫)ವೈರಾಗ್ಯದ ಕುರುಹು-ಉದಾ:ಸ್ವಾಮಿಗಳು, ೬) ಫ್ಯಾಷನ್‍ಗೆ-ಹಾಗೇ ಬೋಳುತಲೆ ಪ್ರದರ್ಶಿಸಲು, ಬೇಕಾದಾಗ ಬೇರೆ ಬೇರೆ ಕೃತಕ ತಲೆ ಕೂದಲನ್ನು ಧರಿಸಲು, ವಿನೂತನವಾಗಿ ಕಾಣಿಸಲು.

ಈಗ ಮೊದಲನೇ ಸಧ್ಯಕ್ಕೆ ಕಾರಣವನ್ನು ಲಂಬಿಸುತ್ತಿದ್ದೇನೆ.
ಹರಕೆಗಾಗಿ ಮುಂಡನ ಮಾಡಿಸಿಕೊಳ್ಳುವರಲ್ಲಿ ತಿರುಪತಿ ತಿಮ್ಮಪ್ಪನ ಭಕ್ತರು ಬಹಳ ಮುಂದು. ಆಂಧ್ರದಲ್ಲಿ ಮುಂಡನ ಮಾಡಿಸಿಕೊಳ್ಳುವವರ ಸಂಖ್ಯೆ (ಎಲ್ಲ ವಯಸ್ಸಿನವರೂ, ಹೆಂಗಸರೂ ಕೂಡ) ಬಹಳ. ಅಲ್ಲದೆ ಒಬ್ಬೊಬ್ಬರು ಆಗಿಂದಾಗ್ಗೆ ಹರಕೆ ಹೊರುತ್ತಾರೆ. ಅಂದರೆ ಕೆಲವರನ್ನು ಪದೇ ಪದೆ ಬೋಳುತಲೆಯಲ್ಲಿ ನೋಡಬಹುದು. ನಮ್ಮಲ್ಲಿ ಇದು ಅಷ್ಟು ಸಾಧಾರಣವಲ್ಲ. ಯಾರಾದರು ಬೋಳುತಲೆಯಲ್ಲಿದ್ದರೆ ಅವರ ಕುಟುಂಬದಲ್ಲಿ ಯಾರಾದರೊಬ್ಬರ ಅವಸಾನವಾಗಿದೆಯೆಂದು ಅನುಮಾನ ಪಡುವಷ್ಟು ಸಂಧರ್ಭ ಉಂಟಾಗುತ್ತದೆ. ಇದು ಎಷ್ಟು ಪ್ರಸಿದ್ಧಿಯಾಗಿದೆಯೆಂದರೆ ತಿರುಪತಿಯಲ್ಲಿ ಶೇಖರವಾಗುವ ಮನುಷ್ಯರ ಉದ್ದದ ತಲೆಕೂದಲಿಗೆ ಬಹಳ ಬೇಡಿಕೆ ಇದೆ.
ಇನ್ನೊಂದು ಪ್ರಯೋಗ ನೋಡಿ. "ಕ್ಷೌರ ಆಯಿತು" ಎಂದರೆ ಹಣ ಕೈತಪ್ಪಿ ಹೋಯಿತು ಎಂಬರ್ಥದಲ್ಲಿ ಹೇಳುತ್ತೇವೆ. ನೀರಿಲ್ಲದ ಕ್ಷೌರ ಅಂದರೆ ಅತಿ ವೇದನೆ ಮತ್ತು ನಷ್ಟವಾದರೆ ನಮಗೆ ನೀರಿಲ್ಲದ ಕ್ಷೌರ ಆಯಿತೆಂದು ಹೇಳುತ್ತೇವೆ. ಒದ್ದೆ ಮಾಡದೆ ಸೋಪು ಹಚ್ಚದೆ ಕ್ಷೌರಮಾಡಿಕೊಳ್ಳುವುದು ಅಂದರೆ ಚರ್ಮಕ್ಕೆ ನೋವು ಆಗುತ್ತದೆ. ಇದರ ವಿಸ್ತರಣೆಯೆ ನೀರಿಲ್ಲದ ಕ್ಷೌರದ ಅರ್ಥ. ಈಗ ಎಲೆಕ್ಟ್ರಿಕ್ ಶೇವರ್‍ಗಳು ಬಹುತೇಕ ನೀರಿಲ್ಲದ ಕ್ಷೌರಮಾಡುವ ಉಪಕರಣಗಳೇ. (ವೆಟ್‍ಶೇವರ್ಸ್ ಬರಲು ಪ್ರಾರಂಭ ಆಗಿದೆ). ಈ ನುಡಿಗಟ್ಟನ್ನು ಬಿಟ್ಟುಬಿಡಬೇಕೇನೋ!

No comments: