Friday, May 9, 2008

ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ.

ನಾವು ಇನ್‍ಟೆರ್‍ಮೀಡಿಯೇಟ್ ಕಾಲೇಜಿನಲ್ಲಿ ಓದುತ್ತಿದ್ದ ಕಾಲಕ್ಕೆ (೧೯೫೧-೫೩) ಕನ್ನಡದ ಪರೀಕ್ಷಾ ಭಾಗದಲ್ಲಿ ಇಂಗ್ಲೀಷ್‍ನ ಒಂದು ವಾಕ್ಯವೃಂದವನ್ನು ಕನ್ನಡಕ್ಕೆ ಅನುವಾದ ಮಾಡಲು ಒಂದು ಪ್ರಶ್ನೆ ಇರುತ್ತಿತ್ತು. ಅದಕ್ಕೆ ಪೂರಕವಾಗಿ ಪಾಠಕ್ರಮದಲ್ಲಿ ನಮ್ಮ ಉಪನ್ಯಾಸಕರು ಅನುವಾದದ ನಿಯಮಗಳನ್ನು ತಿಳಿಸುತ್ತಾ ಅನುವಾದ ವಾದ ವಾಕ್ಯ ಕನ್ನಡದ ಜಾಯಿಮಾನಕ್ಕೆ ಹೊಂದಿಕೊಂಡಿರಬೇಕೆಂದೂ ಪದಶಃ ಅನುವಾದ ಮಾಡಿದರೆ ಕೆಲವು ಸಂಧರ್ಭಗಳಲ್ಲಿ ಆಭಾಸ ಆಗುವುದೆಂದು ನಿರೂಪಿಸುತ್ತಾ ಒಂದು ಉದಾಹರಣೆಯನ್ನು ತೆಗೆದುಕೊಂಡರು ಅದು ಹೀಗಿತ್ತು
Dear old lady was jaywalking on the road unmindful of the vehicles.

"dear" ಪದಕ್ಕೆ ಒಂದು ಸರಿಯಾದ ಕನ್ನಡ ಪದ ಹುಡುಕಲು ತರಗತಿಯಲ್ಲಿ brain storming ಪ್ರಾರಂಬಿಸಿದರು. ಉತ್ತರಗಳಿಗೇನು ಕಡಿಮೆ ಆಗಲಿಲ್ಲ. ಕೈನಡುಗುವ ಮುದುಕಿ, ಮುದ್ದು ಮುದುಕಿ, ಇನ್ನು ಏನೇನೋ. ಕೆಲ ಸಮಯದ ನಂತರ ಉಪನ್ಯಾಸಕರೇ "ಮಹರಾಯಗಿತ್ತಿ" ಎಂದರೆ ಹೇಗಿರತ್ತೆ ಅಂತ ಸೂಚಿಸಿದರು.

ಕೊನೆಗೆ ಆ ಇಂಗ್ಲೀಷ್ ವಾಕ್ಯಕ್ಕೆ ಕನ್ನಡ ಅನುವಾದದ ವಾಕ್ಯ "ಆ ಮಹರಾಯಗಿತ್ತಿ ಮುದುಕಿಯು ರಸ್ತೆಯ ಮಧ್ಯದಲ್ಲಿ ವಾಹನಗಳ ಪರಿವೆ ಇಲ್ಲದೆ ಹರಿ ಹಾಯ್ದು ನಡೆದುಹೋಗುತ್ತಿದ್ದಳು." ಎಂದು ಅನುವಾಯಿತು.

ಈ ಅನುವಾದದ ಪ್ರಕರಣ ನನ್ನ ಮನಸ್ಸಿನಲ್ಲಿ ನಿಂತು ಹೋಗಿದೆ. ಇತ್ತಿಚೆಗೆ ನಾನು ಸುಂದರ ಇಂಗ್ಲೀಷ್ ವಾಕ್ಯಗಳನ್ನು ಕಂಡಾಗಲೆಲ್ಲ ಕನ್ನಡಕ್ಕೆ ತರ್ಜುಮೆ ಮಾಡಿದರೆ ಅದು ಯಾವ ರೂಪ ತಳೆಯುತ್ತದೆಂದು ಆಲೋಚಿಸುತ್ತಿರುತ್ತೇನೆ. ಸುಂದರ ವಾಕ್ಯಗಳು ಹೇಗೆ ಹುಟ್ಟುತ್ತವೆ ಅಂದರೆ ಆಲೋಚನಾ ಕ್ರಮ ಸುಂದರವಾಗಿರಬೇಕು. ಅದನ್ನು ಉಪಯೋಗಿಸುವ ಅವಕಾಶ ಸಿಗಬೇಕು. ಅದನ್ನು ನಾವು ಕಂಡಲ್ಲಿ ಮೆಚ್ಚಿ ಮೆಲಕು ಹಾಕಬೇಕು.

ಈಗ ನನಗೆ ಸಿಕ್ಕ ಒಂದು ವಾಕ್ಯವೃಂದವನ್ನೇ ತೆಗೆದುಕೊಳ್ಳೋಣ.
I married a 5-foot-2, 103-pound woman 52 years ago. She's as healthy as a horse, although she has since put on a few pounds -- she now weighs a whopping 105. My wife has been in the hospital four times in her life. Three of those were for childbirth. She is two months shy of 80, and still has a figure most women would be proud of at 30. Call me prejudiced, but she is the perfect size for me.

ಇದನ್ನು ಕನ್ನಡಕ್ಕೆ ಅನುವಾದ ಮಾಡಿದರೆ ಹೇಗಿರುತ್ತದೆ!

"ನಾನು ೫೨ ವರ್ಷಗಳ ಹಿಂದೆ ಮದುವೆಯಾದ ೫ಅಡಿ ೨ ಅಂಗುಲ ಉದ್ದ ೧೦೩ ಪೌಂಡ್ ತೂಕದ ಹುಡುಗಿ, ಮಜಬೂತಾಗಿ ಆರೋಗ್ಯವಂತಳಾಗಿದ್ದಳು, ಆದರೆ ಈಗ ಸಿಕ್ಕಾಪಟ್ಟೆ ತೂಕವಾಗಿಬಿಟ್ಟಿದ್ದಾಳೆ. ಅಬ್ಬಾ ೧೦೫ ಪೌಂಡಿಗೆ ಏರಿಹೋಗಿದ್ದಾಳೆ. ಅವಳು ಅವಳ ಜೀವಮಾನದಲ್ಲಿ ನಾಲ್ಕು ಬಾರಿ ಆಸ್ಪತ್ರೆಯ ಮುಖ ಕಂಡಿದ್ದಾಳೆ- ಮೂರು ಹೆರಿಗೆಗೆ. ಅವಳು ತನ್ನ ಎಂಭತ್ತನೆ ವಯಸ್ಸು ಮುಟ್ಟಲು ಇನ್ನೂ ಎರಡು ತಿಂಗಳೆಂಬ ಮೆಟ್ಟಿಲುಗಳನ್ನು ಲಜ್ಜೆಯಿಂದ ಹತ್ತುತ್ತಿದ್ದಾಳೆ, ಆದರೂ ೩೦ರ ಹರೆಯದ ಹೆಂಗಳೆಯರಂತೆ ಮೈಕಟ್ಟು ಹೊಂದಿ ನನ್ನ ಕಣ್ಣು ಇಚ್ಛೆಗೆ ತಕ್ಕಂತೆ ಇದ್ದಾಳೆ. ನನ್ನನ್ನು ಬೇಕಾದರೆ ಪೂರ್ವಾಗ್ರಹ ಪೀಡಿತನೆಂದೇ ಅಂದುಕೊಳ್ಳಿ."

ನಿಮಗೆ ಹೇಗೆ ಅನ್ನಿಸುತ್ತೆ?
ವಿ.ಸೂ: ಬೇಕಂತಲೇ ಪೌಂಡ್ ಅನ್ನು ಕಿಲೋಗ್ರಾಮಾಗಿ, ಅಡಿಗಳನ್ನು ಮೀಟರಾಗಿ ಮಾರ್ಪಡಿಸಿಲ್ಲ.

No comments: