ನೆನ್ನೆ ಬೆಂಗಳೂರಿನ ರಾಗಿಗುಡ್ಡದ ಬಯಲು ರಂಗಮಂದಿರದಲ್ಲಿ ಒಂದು ಕಾರ್ಯಕ್ರಮವಿತ್ತು. ಅಲ್ಲಿ ನಾನು ಗಮನಿಸಿದ್ದು ನೆಲ ಪೂರ್ತಿ ಸಗಣಿಯಿಂದ ಸಾರಿಸಿದ್ದುದು.
ಇದು ನನಗೆ ನೆನಪು ತಂದ ಘಟನೆ ಎಂದರೆ ನಮ್ಮ ಪ್ರೌಢ ಶಾಲೆಯಲ್ಲೂ ಸಗಣಿಯಿಂದ ಸಾರಿಸಿದ ನೆಲವಿದ್ದ ಒಂದು ಕೊಠಡಿಯಿತ್ತು ಎಂಬುದು. ಸಗಣಿಯಿಂದ ಸಾರಿಸಿದ ನೆಲವಿದ್ದ ಕೊಠಡಿಯಲ್ಲಿ ನಮ್ಮ ತರಗತಿ ನಡೆಯುತ್ತಿತ್ತು. ಇದಕ್ಕೆ ಕಾರಣ ನಮ್ಮ ಶಾಲೆಯಲ್ಲಿ ಸಾಕಷ್ಟು ಕೊಠಡಿಗಳು ಇರಲಿಲ್ಲ. ಮೂರೂ ಗುಡಿಸಲು ಆಕಾರದ ಶೆಡ್ಡುಗಳನ್ನು ಕಟ್ಟಿಸಿದ್ದರು. ನೆಲಕ್ಕೆ ಪರಿಷ್ಕಾರ ಮಾಡಿರಲಿಲ್ಲ. ಹಣದ ಅಭಾವವೇ ಕಾರಣ ಎನ್ನಬಹುದು. ಹೊಸದರಲ್ಲಿ ನೆಲ ಭದ್ರವಾಗಿದ್ದರೂ ಕಾಲಕ್ರಮೇಣ ಧೂಳು ಏಳಲು ಪ್ರಾರಂಭವಾಯಿತು. ನಾವೇ ಹುಡುಗರುಗಳು ಸಗಣಿಯಿಂದ ಸಾರಿಸಿ ನೆಲವನ್ನು ಮೇಲ್ಮಟ್ಟಕ್ಕೆ ತರಲು ನಿರ್ಧರಿಸಿ ಒಂದು ಭಾನುವಾರ ಬಕೆಟ್, ನೀರೂ, ಸಗಣಿ ಮತ್ತು ಕಡ್ಡಿ ಪರಕೆ ಇವುಗಳಿಂದ ಸಜ್ಜಿತರಾಗಿ ಕೆಲಸ ನಿರ್ವಹಿಸಿದೆವು. ಇದು ಹೇಗೆ ಪರಿಣಾಮಕಾರಿಯಾಯಿತೆಂದರೆ ಶಾಲಾ ಮುಖ್ಯೋಪಾಧ್ಯಾಯರು ಪ್ರಶಂಸಾ ಮೆಮೋ ಹೊರಡಿಸಿದರು. ಇದರಿಂದ ಉಳಿದ ಎರಡು ತರಗತಿಗಳ ಹುಡುಗರುಗಳು ಈ ಸುಧಾರಣೆಯನ್ನು ತರಬೇಕಾಯಿತು. ಅವರುಗಳಲ್ಲಿ ಕೆಲವರು ನಮ್ಮನ್ನು ಬೈದುಕೊಂಡರು ಎನ್ನುವುದು ಸತ್ಯ.
ಇರಲಿ, ಈ ಪರಿಷ್ಕಾರದಿಂದ ನೆಲದಿಂದ ಧೂಳು ಏಳುವುದು ಕಡಿಯಾಗುವುದರೆ ಜೊತೆಗೆ ಮಣ್ಣಿನ ವಾಸನೆಯ ಬದಲು ಹಿತಕರವಾದ ವಾಸನೆ ಹೊರಡುತ್ತದೆ. ಅದು ಕ್ರಿಮಿನಾಶಕವು ಹೌದು. ವೈಭವವಲ್ಲದಿದ್ದರೂ ಶುಚಿಯಾಗಿರುತ್ತದೆ.
೧೯೪೮-೧೯೫೧ ರ ಕಾಲದಲ್ಲಿ ಗೌರೀಬಿದನೂರಿನ ಆಚಾರ್ಯ ಪ್ರೌಡ ಶಾಲೆಯಲ್ಲಿ ನಡೆದ ಘಟನೆ.
೧೫-೮-೫೦
9 years ago
No comments:
Post a Comment