Friday, May 9, 2014

ಮನೆಗೆ ಹೆಸರಿಡು

ಮನೆಗೆ ಹೆಸರು ಇಡುವ ಸಂಭ್ರಮ.

ಜೀವಕ್ಕೆ ಹೆಸರು ಇಡಬೇಕು. ಅದನ್ನು ಇತರರು ಗುರುತಿಸಲು, ಕರೆಯಲು ಹೆಸರು ಬೇಕು. ಮಗುವಿಗೆ ಶೋಡಷ ಸಂಸ್ಕಾರಗಳಲ್ಲಿ ಒಂದಾದ ನಾಮಕರಣವೆಂಬ ಪದ್ಧತಿ ಇದ್ದೇ ಇದೆ.

ಮನೆಗೆ ಹೆಸರಿಡುವ ಗೀಳು ಈಗೀಗ ಹೆಚ್ಚಾಗುತ್ತಿದೆ. ಮನೆಯನ್ನು ಗುರುತಿಸಲು ಪುರಸಭೆಯವರು ಮನೆ ಸಂಖ್ಯೆ ಕೊಟ್ಟಿರುತ್ತಾರೆ. ಅದರ ಜೊತೆಗೆ, ರಸ್ತೆ ಹೆಸರು ಇದ್ದರೆ ಮನೆಯನ್ನು ಸೂಜಿಚುಚ್ಚಿದಂತೆ ಗುರುತಿಸಬಹುದು. ಆದರೂ ಇದು ಸಾಲದೆಂಬಂತೆ ಮನೆಗೆ ಹೆಸರಿಡುವ ಈ ಗೀಳಿಗೆ ಏನೆಂದು ಹೇಳಬೇಕು? ಈಗೀಗ ಗೃಹಪ್ರವೇಶದ ಆಹ್ವಾನಪತ್ರಿಕೆಯಲ್ಲೇ ಆ ಹೆಸರು ನಮೂದಿಸಲಾಗುತ್ತಿದೆ. ಹೆಸರನ್ನು ಆರಿಸುವ ಕಸರತ್ತು ಮಗುವಿನ ಹೆಸರನ್ನು ಆರಿಸುವಷ್ಟೇ ಕಠಿಣ. ಎಲ್ಲೆಲ್ಲೋ ಹುಡುಕುವುದು, ಯ್ಯಾರ್ಯಾರನ್ನೋ ಕಾಡುವುದು, ನಿಮ್ಮ ಮನಸ್ಸನ್ನೇ ಕೆದಕಿ, ಹುರಿದು, ತೊಳೆದು ಇನ್ನೆಲ್ಲಾ ಕ್ರಿಯೆಯಿಂದ ಹೊರಬಂದದ್ದು ಅದು.
ನನಗೆ ಹೀಗೇ ಆಯಿತು. ನಾನು ಮನೆಗೆ ಹೆಸರಿಡಲು ಯೋಚಿಸಿದಾಗ ಮೊದಲು ಹೊಳೆದದ್ದು 'ಪ್ರಶಾಂತಿ'. ಈ ಹೆಸರನ್ನು ಆಗಾಗಲೇ ಸತ್ಯಸಾಯಿಬಾಬಾ ನಗರಕ್ಕೇ ಇಟ್ಟುಬಿಟ್ಟಿದ್ದು ಯಾರೋ ನನಗೆ ತಿವಿದು ಹೇಳಿದರು. ಇದನ್ನು ಕೈ ಬಿಟ್ಟೆ. ಹೆಸರನ್ನು ಹುಡುಕುವ ಕೆಲಸದಲ್ಲಿ ನಾನು ಇರುತ್ತಿದ್ದಾಗ ಇತರರ ಕೌಶಲ್ಯವನ್ನು ಮೆಚ್ಚುವ ಅವಕಾಶ ಸಿಕ್ಕಿತು. ಆಹಾ ಎಂಥಾ ಹೆಸರುಗಳನ್ನು ಯೋಚಿಸಿದ್ದಾರೆ--"ಮಂದಾರ", 'ಕನಸು", ಈ ಪಟ್ಟಿಯನ್ನು ಬೆಳೆಸಲು ಇಷ್ಟವಿಲ್ಲ. ಏಕೆಂದರೆ ನನ್ನ ಬೆನ್ನು ತಟ್ಟಿಕೊಳ್ಳಲು ಆಗುವುದಿಲ್ಲವಲ್ಲ!

ನನಗೆ ಗೊತ್ತಿದ್ದ ಒಬ್ಬರು ತಮ್ಮ ಮನೆ ಮಾರಾಟಮಾಡಿದ ಮೇಲೂ ಆ ಮನೆಗೆ ಅವರು ಇಟ್ಟಿದ್ದ ಹೆಸರನ್ನೇ ಮುಂದುವರಿಸಿರೆಂದು ಕೊಡುಕೊಂಡವರಿಗೆ ದುಂಬಾಲು ಬಿದ್ದಿದ್ದು ನೋಡಿದ್ದೇನೆ. ಏನೋ, ಏಕೋ, ಮನೆಕೊಂಡು ಕೊಂಡವರು ಆ ಮನೆಯನ್ನು ನವೀಕರಿಸಿದರೂ ಅದೇ ಹೆಸರನ್ನು ಮುಂದುವರಿಸಿದರು. ಇನ್ನೊಬ್ಬರು ಮನೆ ಮಾರಾಟಮಾದಿದಾಗ ಮನೆಯ ಹೆಸರಿನ ಫಲಕವನ್ನು ಕಿತ್ತು ಮುಂದೆ ತಾವು ಕಟ್ಟುವ ಮನೆಗೆ ಬೇಕೆಂದು ತೆಗೆದುಕೊಂಡು ಹೋದರು.  

ಆಮೇಲೆ ಇಡೋಣವೆಂದು ಮನೆಯ ಕಾಪೌಂಡ್‌ನ ಕಂಭದಲ್ಲಿ ಬಾಗಿಲಿನ ಹೆಸರು ಕೆತ್ತಿದ ಕಲ್ಲು ಇಡುವ ಮೀಸಲು ಜಾಗವನ್ನು ಖಾಲಿ ಬಿಟ್ಟೆ. ಈಗಲೋ ಆಗಲೋ ಈ ಕೆಲಸ ಮುಗಿಸಬೇಕೆಂದು ಇದ್ದವನಿಗೆ ಎಷ್ಟು ಕಾಲ ಹಿಡಿಯಿತು ಗೊತ್ತೇ? ಕೇವಲ ಮೂವತ್ತು ವರ್ಷ. ಇರಲಿ, ಇದು ಹೇಗೆ ಕೊನೆಗೊಂಡಿತು ಅಂದರೆ ಹುದುಕಿ ಹುಡುಕಿ ಅದನ್ನು ನಿಲ್ಲಿಸಿಯೇ ಬಿಟ್ಟೆ! ಆದರೂ ಅದು ನಿಜವಾದ ಕೊನೆಯಲ್ಲ. ನಮ್ಮ ಮನೆಗೆ ಹೆಸರು ಬಂದೇ ಬಂತು. ನನ್ನ ಮೊದಲನೆ ಮಗಳಿಗೆ ಹೆಸರಿಡುವಾಗ ಮಾಡಿದ್ದ ಕಸರತ್ತು ಕೆಲಸಕ್ಕೆ ಬಂತು. ಅವಳಿಗೆ "ನಿರುಪಮ" ಎಂದು ಹೆಸರಿಟ್ಟಾಗ ಆಗಿದ್ದ ಸಂತೋಷ ಅಷ್ಟಿಷ್ಟಲ್ಲ. ಮನೆಗೂ ಅದೇ ಹೆಸರಿಟ್ಟು ಬಿಟ್ಟೆವು, ಅವಳ ನೆನಪಿಗಾಗಿ, ಅವಳು ನಮ್ಮನ್ನು ಅಗಲಿದ ಮೇಲೆ. ಹೆಸರು ಕೆತ್ತಿದ ಕಲ್ಲು ಇಡುವ ಮೀಸಲು ಜಾಗ ಈಗ ತುಂಬಿದೆ!   

No comments: