Friday, May 9, 2014

ಗೌರವ.


ಗೌರವ ಕೊಟ್ಟು ಗೌರವ ಪಡಿ; ಆಗ್ರಹದಿಂದಲ್ಲ ಎಂಬ ಹೇಳಿಕೆ ಬಹಳ ಪ್ರಚಾರದಲ್ಲಿದೆ. ಗೌರವ ಅಂದರೇನು ಎಂದು ನಾನು ಮನಸ್ಸಿನಲ್ಲಿ ಯೋಚಿಸುತ್ತದ್ದಾಗ ಅಸಡ್ಡೆಯಿಂದ ನೋಡುವುದು ಅಗೌರವ. ಅದಕ್ಕೆ ವಿರುದ್ಧ ಗೌರವ ಅನ್ನಿಸಿತು. 

ಒಂದು ಘಟನೆ ಜ್ಞಾಪಕಕ್ಕೆ ಬಂತು. ನಾನು ಕನ್ನಡಕದ ಅಂಗಡಿಗೆ ಹೋಗಿ ನನ್ನ ಕನ್ನಡಕ ಅಳ್ಳಕವಾಗಿದೆ, ಬಿಗಿ ಮಾಡಿ ಕೊಡಿ ಎಂದು ಕೇಳಿದಾಗ, ನೀವು ಕನ್ನಡಕವನ್ನು ಒಂದು ಕೈಲಿ ಎತ್ತುತ್ತೀರಾ, ಒಂದೇ ಭಾಗಕ್ಕೆ ಭಾರ ಬಿದ್ದು ಅದಕ್ಕೇ ಹೀಗೆ ಆಗುತ್ತೆ ಅಂತ ಅವರು ಹೇಳಿ, ನೀವು ಎರಡೂ ಕೈಲಿ ಕನ್ನಡಕವನ್ನು ಎತ್ತಿ ಹಿಡಿದು ಧರಿಸುವ ಅಭ್ಯಾಸ ಮಾಡಿಕೊಳ್ಳಿ ಎಂದರು. ನಾನು ಕನ್ನಡಕವನ್ನು ಅಸಡ್ಡೆಯಿಂದ (ಅಗೌರವದಿಂದ) ನೋಡುತ್ತಿದ್ದೆ ಎಂದಾಯಿತು.

ಇನ್ನೊಂದು ಘಟನೆ ಜ್ಞಾಪಕಕ್ಕೆ ಬಂತು.  ನಾನು ಒಂದು ಸರ್ತಿ ಆಟೋ ರಿಕ್ಷಾದವರಿಗೆ ಇಪ್ಪತ್ತೈದು ರೂಪಾಯಿ ಕೊಡಬೇಕಾಗಿದ್ದಾಗ ಚಿಲ್ಲರೆ ಇಲ್ಲದೆ ಮೂವತ್ತು ರೂಪಾಯಿ ಕೊಟ್ಟೆ. ಆತ ಚಿಲ್ಲರೆ ಕೊಡುವ ಸೂಚನೆ ಇಲ್ಲದಿದ್ದಾಗ ಐದು ರೂಪಾಯಿ ಕೊಡಿ ಎಂದು ಕೇಳಿದೆ. ಆತ ನನ್ನ ದುರುಗುಟ್ಟಿಕೊಂಡು, ಎಲ್ಲರೂ ಎಷ್ಟೆಷ್ಟೋ ಬಿಟ್ಟುಬಿಡುತ್ತಾರೆ, ಏನು ನೀನು ಐದು ರೂಪಾಯಿ ಬಿಡಲ್ವಾ ಅಂದ. ನಾನು ಐದು ರೂಪಾಯಿ ವಾಪಸ್ಸು ಕೇಳಿದ್ದರಿಂದ, ನಾನು ಗೌರವಕ್ಕೆ ಅಯೋಗ್ಯನಾಗಿ 'ನೀವು' ಇಂದ 'ನೀನು' ಆದೆ.

ನನ್ನ ಸ್ನೇಹಿತರೊಬ್ಬರು ಎದುರಿಗೆ ಸಿಕ್ಕ ಪರಿಚಿತರಿಗೆ ಕೈಜೋಡಿಸಿ ನಮಸ್ಕರಿಸುತ್ತಿದ್ದರು. ಆದರೆ ಅವರ ಎದುರಿನವರು ಕೈಜೋಡಿಸಿ ನಮಸ್ಕರಿಸದಿದ್ದರೆ ಅವರೆ ಬೇಸರವಾಗುತ್ತಿತ್ತು. ಏನು ಗೋಣು ಬಗ್ಗಿಸಿ ಹೋಗಿಬಿಡುತ್ತಾರೆ, ಅವರಿಗೆ ಜಂಭ ಅನ್ನುತ್ತಿದ್ದರು. ಗೌರವ ಸೂಚಿಸುವ ಪದ್ಧತಿಯಲ್ಲಿ ತಮ್ಮದೇ ಸರಿ ಮಾರ್ಗ ಎನ್ನುವುದು ಅವರ ಅನಿಸಿಕೆ. ಇದೂ ಒಂದು ಕೊಂಕು ಅಲ್ಲವೇ?

ಜವಹರ್‌ಲಾಲ್‌ನೆಹರು ಅವರು ಮೊದಲು ಪ್ರಧಾನಿಯಾದಾಗ ಅವರ ಛೇಂಬರಿನ ಕಾವಲಿಗೆ ನೇಮಿಸಿದ್ದ ನೌಕರ ಇವರು ಒಳಹೋಗುವಾಗ, ಹೊರಬರುವಾಗ ಎದ್ದುನಿಂತು ಗೌರವ ಸೂಚಿಸುತ್ತಿದ್ದನಂತೆ. ನೆಹರು ಅವರಿಗೆ ಇದು ಅನವಶ್ಯಕ, ಇದು ಗುಲಾಮಿ ಪದ್ಧತಿ ಅನ್ನಿಸಿತಂತೆ. ಎದ್ದು ನಿಲ್ಲುವುದು ಬೇಡ ಎಂದು ತಾಕೀತು ಮಾಡಿದರಂತೆ. ಆಮೇಲೆ ಬರುಬರುತ್ತಾ ಬಾಗಿಲು ಕಾಯುವವ ಎದ್ದುನಿಲ್ಲುವುದು ನಿಲ್ಲಿಸಿದ್ದು ಅಷ್ಟೇ ಅಲ್ಲ, ಕೂತಲ್ಲೇ ತೂಕಡಿಸುವುದಕ್ಕೆ ಪ್ರಾರಂಭಿಸಿದನಂತೆ. ಅವನು ಮಾಡುತ್ತಿದ್ದುದು ಗೌರವವಷ್ಠೇ ಅಲ್ಲ, ಕರ್ತವ್ಯ ಅನ್ನಿಸಿ ಮೊದಲಿನ ನಿಯಮವನ್ನೇ ಬಳಕೆಗೆ ಮತ್ತೆ ತಂದರಂತೆ.

 

No comments: